'ಪಿಕೆ' ವಿರುದ್ಧ ಕೃತಿಚೌರ್ಯ ಆರೋಪ

ಆಮೀರ್ ಖಾನ್ ನಟನೆಯ ಪಿಕೆ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ ಕೇಳಿಬಂದಿದ್ದು, ಚಿತ್ರಕಥೆ ತಮ್ಮ ಕೃತಿ...
ಪಿಕೆ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)
ಪಿಕೆ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ)

ನವದೆಹಲಿ: ಆಮೀರ್ ಖಾನ್ ನಟನೆಯ ಪಿಕೆ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ ಕೇಳಿಬಂದಿದ್ದು, ಚಿತ್ರಕಥೆ ತಮ್ಮ ಕೃತಿಯಾಧಾರಿತವಾಗಿದೆ ಎಂದು ಲೇಖಕರೊಬ್ಬರು ದೂರಿದ್ದಾರೆ.

ಕಪಿಲ್ ಇಸಾಪುರಿ ಎಂಬ ಲೇಖಕ ಈ ಆರೋಪ ಮಾಡಿದ್ದು, 2013ರಲ್ಲಿ ತಾನು ರಚಿಸಿದ್ದ 'ಫರಿಷ್ಟಾ' ಕೃತಿಯಲ್ಲಿನ ಕಥೆಯನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜ್ಯೋತಿಕಾ ಕಲ್ರಾ ಎಂಬ ವಕೀಲರ ಮೂಲಕ ನ್ಯಾಯಾಲಯದ ಮೆಟ್ಟಿಲೇರಿರುವ ಇಸಾಪುರಿ ಅವರು 1 ಕೋಟಿ ರು. ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

'ಪಿಕೆ' ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಿರ್ಮಾಪಕ ವಿನೋದ್ ಚೋಪ್ರಾ, ಚಿತ್ರಕಥೆ ಬರಹಗಾರ ಅಭಿಜಿತ್ ಜೋಷಿ ವಿರುದ್ಧ ಕಪಿಲ್ ಇಸಾಪುರಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ಚಿತ್ರಕ್ಕಾಗಿ ತಮ್ಮ ಕೃತಿಯ ಪಾತ್ರಗಳನ್ನು, ವಿಚಾರಗಳ ಅಭಿವ್ಯಕ್ತಿ ಮತ್ತು ಸನ್ನಿವೇಶಗಳನ್ನು ಕದಿಯಲಾಗಿದೆ ಎಂದು ಲೇಖಕರು ಆರೋಪಿಸಿದ್ದಾರೆ.

 'ಚಿತ್ರವನ್ನು ತಾವು ಬಹಳ ತಡವಾಗಿ ವೀಕ್ಷಿಸಿದ್ದು, ಚಿತ್ರದ ಬಹುತೇಕ ಪಾತ್ರಗಳು ತಮ್ಮ ಕೃತಿಯದ್ದೇ ಆಗಿವೆ. ದೇವಮಾನವರನ್ನು ಮೂಢವಾಗಿ ನಂಬುವ ಭಕ್ತರು ಅವರನ್ನು ಯಾವುದೇ ರೀತಿಯಲ್ಲಿಯೂ ಪ್ರಶ್ನಿಸದೇ ಅವರು ಹೇಳಿದ್ದೇ ವೇದವಾಕ್ಯ ಎನ್ನುವಂತೆ ಪಾಲಿಸುತ್ತಾರೆ. ಇದನ್ನು ನಾನು ನನ್ನ ಕೃತಿಯಲ್ಲಿ ಹೇಳಿದ್ದೇನೆ.

ಆದರೆ ಪಿಕೆ ಚಿತ್ರದಲ್ಲಿ ಇದೇ ಕಥೆಯನ್ನು ಹಿನ್ನಲೆಯಾಗಿಟ್ಟುಕೊಳ್ಳಲಾಗಿದೆ. ಕೇವಲ ಕಥೆ ಮಾತ್ರವಲ್ಲದೇ ಚಿತ್ರದ ಬಹುತೇಕ ಪಾತ್ರಗಳನ್ನು, ಅಭಿವ್ಯಕ್ತಿ ವಿಚಾರಗಳನ್ನು ಮತ್ತು ಸನ್ನಿವೇಶಗಳನ್ನು ಕೂಡ ಕದಿಯಲಾಗಿದೆ. ಈ ವಿಚಾರ ತಿಳಿಯದಂತೆ ಮಾಡಲು ಪಾತ್ರಗಳನ್ನು ಅಲ್ಪ ಪ್ರಮಾಣದಲ್ಲಿ ತಿರುಚಲಾಗಿದೆ. ಚಿತ್ರದಲ್ಲಿನ ಹಲವು ಸನ್ನಿವೇಶಗಳು ತಮ್ಮ ಕೃತಿಯಲ್ಲಿರುವಂತೆಯೇ ಇದೆ ಎಂದು ಲೇಖಕ ಇಸಾಪುರಿ ಆರೋಪಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಸಿಕೊಂಡಿರುವ ನ್ಯಾಯಾಲಯ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದು, ಸ್ಪಷ್ಟನೆ ಕೇಳಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಈ ಹಿಂದಿನ ಚಿತ್ರ 3 ಇಡಿಯಟ್ಸ್ ಕೂಡ ಈ ಹಿಂದೆ ಇಂತಹುದೇ ಕೃತಿಚೌರ್ಯ ಆರೋಪ ಎದುರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com