ಪತಿಗೆ ಆಶಾ'ಕಿರಣ' ಆಗದ ಬೇಡಿ!

ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಸದ್ದು ಮಾಡಿದ್ದ, ಈಗ ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಸುದ್ದಿ ಮಾಡುತ್ತಿರುವ...
ಕಿರಣ್ ಬೇಡಿ ಜತೆ ಬ್ರಿಜ್ ಬೇಡಿ
ಕಿರಣ್ ಬೇಡಿ ಜತೆ ಬ್ರಿಜ್ ಬೇಡಿ

ನವದೆಹಲಿ: ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಸದ್ದು ಮಾಡಿದ್ದ, ಈಗ ದೆಹಲಿ ಬಿಜೆಪಿ ಸಿಎಂ ಅಭ್ಯರ್ಥಿಯಾಗಿ ಸುದ್ದಿ ಮಾಡುತ್ತಿರುವ ಕಿರಣ್ ಬೇಡಿ ಬಗ್ಗೆ ಎಲ್ಲರಿಗೂ ಗೊತ್ತು. ಆದರೆ ಆಕೆಯ ಗಂಡನ ಬಗ್ಗೆ ಏನು ಗೊತ್ತು? ಪಂಜಾಬ್‌ನ ಪತ್ರಿಕೆಯೊಂದು ಕಿರಣ್ ಅವರ ಪತಿ ಬ್ರಿಜ್ ಬೇಡಿ ಅವರನ್ನು ಸಂದರ್ಶಿಸಿದೆ. ಪತ್ನಿ ಕಿರಣ್‌ರನ್ನು ಹೊಗಳುತ್ತಲೇ, ತಾನುಂಡ ನೋವನ್ನು ಬಿಟ್ಟಿಟ್ಟ ಪತಿಯ ಮನದಾಳದ ಮಾತುಗಳ ಸಾರಾಂಶ ಇಲ್ಲಿದೆ.

ನನಗೆ ಫೋಟೋಗ್ರಫಿ, ಟೆನ್ನಿಸ್ ಅಂದರೆ ಅಚ್ಚುಮೆಚ್ಚು. ನಾನು ಕಿರಣ್‌ಳನ್ನು ಭೇಟಿ ಮಾಡಿದ್ದು ದೆಹಲಿಯ ಟೆನ್ನಿಸ್ ಕ್ಲಬ್ ನಲ್ಲಿ. ಆಕೆ ಉತ್ತಮ ಟೆನ್ನಿಸ್ ಆಟಗಾರ್ತಿ. ಕಿರಣ್ ತಂದೆ ಹಾಗೆ ರೂಪಿಸಿದ್ದರು. ನಾವಿಬ್ಬರು  ಅಲ್ಲಿ ಜತೆಯಾಗಿ ಆಡುತ್ತಿದ್ದೆವು. ಆದರೆ, ನನಗಾಗಲೇ ಒಬ್ಬಳ ಜತೆ ಪ್ರೀತಿ ಬೆಳೆದಿತ್ತು. ನನಗೆ ಸರಳ ವಿವಾಹದ ಬಗ್ಗೆ ನಂಬಿಕೆ ಇತ್ತು. ಅದು ಆಕೆಯ ತಂದೆಗೆ ಇಷ್ಟವಿರಲಿಲ್ಲ. ಹೀಗಾಗಿ ಪ್ರೀತಿ ಮುರಿದು ಬಿತ್ತು. ಈ ವಿಷಯ ಕಿರಣ್‌ಗೂ ತಿಳಿದಿತ್ತು. ಪ್ರೀತಿಸಿದ ಹುಡುಗಿಯಿಂದ ವಿರೋಧವಿಲ್ಲದಿದ್ದರೆ ತಮ್ಮ ವಿವಾಹಕ್ಕೇನೂ ಅಡ್ಡಿ ಇಲ್ಲ ಎಂದು ನನ್ನನ್ನು ಕಿರಣ್ ವರಿಸಿದರು.

ನನ್ನನ್ನು ಮದುವೆಯಾದಾಗ ಆಕೆ ಕೆಲಸ ಮಾಡುತ್ತಿರಲಿಲ್ಲ. ಆದರೆ 1971ರಲ್ಲಿ ಕಾಲೇಜು ಉಪನ್ಯಾಸಕಳಾಗಿ ಸೇರಿದ ಕಿರಣ್, ನಂತರ ಐಎಎಸ್ ಅಧಿಕಾರಿಯಾಗಲು ಇಚ್ಛಿಸಿ ಕೆನಡಾಕ್ಕೆ ಪಿಎಚ್‌ಡಿ ಮಾಡಲು ತೆರಳಿದ್ದಳು. ಆಗ ನಾನೇ ಪ್ರೋತ್ಸಾಹಿಸಿ ಕಳುಹಿಸಿಕೊಟ್ಟೆ. ನಾನು  ಗಂಡ ಎಂಬ ಯಾವುದೇ ಅಹಂ ನನಗಿರಲಿಲ್ಲ. ಮನೆಯಲ್ಲಿ ಅಡುಗೆ ಮಾಡಿದ್ದೇನೆ. ಕೆಲವು ಬಾರಿ ಕಿರಣ್ ಬೂಟ್ ಅನ್ನೂ ಪಾಲಿಶ್ ಮಾಡಿದ್ದೇನೆ. ಆಕೆ ದಣಿದು ಬಂದಾಗ ಕಾಲನ್ನೂ ಒತ್ತಿಕೊಟ್ಟಿದ್ದೇನೆ. ನಾನೆಂದೂ ಆಕೆಯ ವೃತ್ತಿ ಜೀವನದ ಏಳ್ಗೆ ತಡೆಯಲಿಲ್ಲ.

ನಮ್ಮ ವಿವಾಹವಾಗಿ ಎರಡನೇ ತಿಂಗಳಿನಲ್ಲಿ ಆಕೆಗೆ ತರಬೇತಿಗೆ ಕರೆ ಬಂತು. ಆಗ ನಾವು ದಿನಕ್ಕೆ 5 ಪತ್ರಗಳನ್ನು ಬರೆದುಕೊಳ್ಳುತ್ತಿದ್ದೆವು. ನಾನು ಅಮೃತಸರದಲ್ಲಿದ್ದೆ. ಆಗ ಕಿರಣ್‌ಗೆ ದೆಹಲಿಗೆ ವರ್ಗವಾಯಿತು. ಆಗ ನಾನು ವಾರಕ್ಕೊಮ್ಮೆ ಹೋಗಿ ಬರುತ್ತಿದ್ದೆ. ಆಕೆಯ ಪೋಷಕರು ದೆಹಲಿಗೆ ಸ್ಥಳಾಂತರಗೊಂಡು ಭದ್ರಕೋಟೆಯಂತೆ ರೂಪಿಸಿಕೊಂಡಿದ್ದರು.

ಇದೇ ವೇಳೆ ನಮಗೆ ಸುಕೃತಿ ಹುಟ್ಟಿದಳು. ಸ್ವಲ್ಪಕಾಲ ಮಗಳಿಗೆ, ನಮ್ಮ ಕುಟುಂಬಕ್ಕೆ ಸಮಯ ಕೊಟ್ಟ ಕಿರಣ್, ಒಳ್ಳೆಯ ತಾಯಿಯಾದಳು. ಆದರೆ ಒಳ್ಳೆಯ ಹೆಂಡತಿಯಾಗಲಿಲ್ಲ. ಈ ವೇಳೆ  ಆಕೆಯ ಪೋಷಕರು ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದರು. ಆದರೆ, ನನ್ನ ಮಗಳ ಭವಿಷ್ಯಕ್ಕಾಗಿ ನಾನು ವಿಚ್ಛೇದನ ನೀಡಲಿಲ್ಲ. ನಮ್ಮಿಬ್ಬರ ಮಧ್ಯೆ ಯಾವತ್ತೂ ಅಹಂ ಅಡ್ಡಿ ಬಂದಿರಲಿಲ್ಲ. ಆಕೆ ಸಹ ಒಂದು ಸಂದರ್ಶನದಲ್ಲಿ ನನ್ನನ್ನು ದೇವರು ಎಂದು ಸಂಭೋದಿಸಿದ್ದಳು. ಆಕೆ ಇದುವರೆಗು ಮಾಡಿದ ಸಾಧನೆ ನನ್ನದು. ನನ್ನ ಹಾರೈಕೆ ಮತ್ತು ಪ್ರೋತ್ಸಾಹವೇ ಇದಕ್ಕೆ ಕಾರಣ.  ಕಿರಣ್ ತಾಯಿಗೆ ತುಂಬಾ ಹತ್ತಿರವಿದ್ದರು. ನನಗೆ ಆಕೆ ಸಮಯ ನೀಡುತ್ತಿಲ್ಲ ಎಂಬ ನೋವು ತಾಯಿಗಿತ್ತು. ನನ್ನ ತಾಯಿ ವಿಶಾಲ ಹೃದಯದವರಾಗಿದ್ದರು. ಅವರ ನಂತರ ನನ್ನ ಸ್ಥಿತಿ ಏನೆಂಬುದೇ ಅವರ ಕೊರಗಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com