ಅಮೆರಿಕದ ಮೊದಲ ಟೆಲಿಗ್ರಾಂ ಪ್ರತಿ: ಒಬಾಮಗೆ ಮೋದಿ ಗಿಫ್ಟ್ !

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಒಬಾಮಗೆ ಸದ್ಭಾವನೆಯ ಸಂಕೇತವಾಗಿ ಪ್ರಧಾನಿ ನರೇಂದ್ರ..
ಅಮೆರಿಕ ಅಧ್ಯಕ್ಷ ಒಬಾಮಗೆ ಪ್ರಧಾನಿ ಮೋದಿ ಅವರು ಭಾರತ-ಅಮೆರಿಕ ಇತಿಹಾಸದ ತುಣುಕನ್ನು ಉಡುಗೊರೆಯಾಗಿ ನೀಡಿದರು.
ಅಮೆರಿಕ ಅಧ್ಯಕ್ಷ ಒಬಾಮಗೆ ಪ್ರಧಾನಿ ಮೋದಿ ಅವರು ಭಾರತ-ಅಮೆರಿಕ ಇತಿಹಾಸದ ತುಣುಕನ್ನು ಉಡುಗೊರೆಯಾಗಿ ನೀಡಿದರು.
Updated on

ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಒಬಾಮಗೆ ಸದ್ಭಾವನೆಯ ಸಂಕೇತವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ-ಅಮೆರಿಕ ಇತಿಹಾಸದ ತುಣುಕನ್ನು ಉಡುಗೊರೆಯಾಗಿ ನೀಡಿದ್ದಾರೆ.

1946ರಲ್ಲಿ ಭಾರತದ ಸಾಂವಿಧಾನಿಕ ಅಸೆಂಬ್ಲಿಗೆ ಅಮೆರಿಕ ಕಳುಹಿಸಿದ ಮೊದಲ ಟೆಲಿಗ್ರಾಂನ ಪ್ರತಿಯೇ ಈ ವಿಶೇಷ ಉಡುಗೊರೆ. ಅಮೆರಿಕದ ಅಂದಿನ ವಿದೇಶಾಂಗ ಸಚಿವ ಡೀನ್ ಅಚೇಸನ್ ಅವರು ಭಾರತದ ಸಾಂವಿಧಾನಿಕ ಅಸೆಂಬ್ಲಿಯ ವಿಭಾಗೀಯ ಸಭಾಧ್ಯಕ್ಷರಾಗಿದ್ದ ಸಚ್ಚಿದಾನಂದ ಸಿನ್ಹಾ ಅವರಿಗೆ ಈ ಟೆಲಿಗ್ರಾಂ ಅನ್ನು ಕಳುಹಿಸಿದ್ದರು. ಈ ಟೆಲಿಗ್ರಾಂನ ಪ್ರತಿಯನ್ನು ಮೋದಿ ಅವರು ನವದೆಹಲಿಯ ಹೈದರಾಬಾದ್ ಹೌಸ್‍ನಲ್ಲಿ ಒಬಾಮಗೆ ನೀಡಿದರು.

ಟೆಲಿಗ್ರಾಂನಲ್ಲಿ ಏನಿತ್ತು?
`ಡಿಸೆಂಬರ್ 9 ಸಮೀಪಿಸಿದ ಹಿನ್ನೆಲೆಯಲ್ಲಿ ನಾನು ನಿಮಗೆ(ಸಾಂವಿಧಾನಿಕ ಅಸೆಂಬ್ಲಿಯ ವಿಭಾಗೀಯ ಸಭಾಧ್ಯಕ್ಷ) ಮತ್ತು ನಿಮ್ಮ ಮೂಲಕ ಭಾರತೀಯರಿಗೆ, ಯಶಸ್ವಿಯಾಗಿ ನಿಮ್ಮ ಕಾರ್ಯವನ್ನು ಪೂರ್ಣ ಗೊಳಿಸಿದ್ದಕ್ಕಾಗಿ ಅಮೆರಿಕ ಸರ್ಕಾರದ ಪರವಾಗಿ ಪ್ರಾಮಾಣಿಕ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಮಾನವತೆಯ ಶಾಂತಿ, ಸ್ಥಿರತೆ ಮತ್ತು ಸಾಂಸ್ಕೃತಿಕ ಸುಧಾರಣೆಗೆ ಭಾರತವು ಬಹಳಷ್ಟು ಕೊಡುಗೆಗಳನ್ನು ನೀಡಬೇಕಿದೆ. ಈ ನಿಟ್ಟಿನಲ್ಲಿ ನೀವಿಡುವ ಹೆಜ್ಜೆಯನ್ನು ವಿಶ್ವಾದ್ಯಂತ ಸ್ವಾತಂತ್ರ್ಯ ಬಯಸುವ ಜನರೆಲ್ಲರೂ ಕುತೂಹಲ ದಿಂದ ಹಾಗೂ ಭರವಸೆಯಿಂದ ಕಾಯುತ್ತಿದ್ದಾರೆ' ಎಂದು ಟೆಲಿಗ್ರಾಂನಲ್ಲಿ ಅಚೇಸನ್ ಸಂದೇಶ ಕಳುಹಿಸಿದ್ದರು.

ಮಿಶೆಲ್‍ಗೆ ಬನಾರಸಿ ರೇಷ್ಮೆ ಸೀರೆ ಚಿನ್ನದ ಮತ್ತು ಬೆಳ್ಳಿಯ ನೂಲುಗಳಿಂದ ಕೈಯಿಂದಲೇ ನೇಯ್ದಿರುವ ವಿಶಿಷ್ಟವಾದ ಕಧುವಾ ಬನಾರಸ್ ರೇಷ್ಮೆ ಸೀರೆ. ಇದು ಅಮೆರಿಕ ಅಧ್ಯಕ್ಷರ ಪತ್ನಿಗೆ ಭಾರತ ನೀಡಿರುವ ಪ್ರೀತಿಯ ಉಡುಗೊರೆ. ಕೆನೆಬಣ್ಣದ ಈ ರೇಷ್ಮೆ ತಯಾರಿಸಲು ನೇಕಾರರು ತೆಗೆದುಕೊಂಡ ಸಮಯ ಬರೋಬ್ಬರಿ 3 ತಿಂಗಳು. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭೆ ಕ್ಷೇತ್ರವಾದ ವಾರಾಣಸಿಯಿಂದ ಬಂದ ಗಿಫ್ಟು ಇದು.

ರು.1.5 ಲಕ್ಷ:
ಮೂವರು ಪರಿಣತ ನೇಕಾರರ ಪರಿಶ್ರಮದ ಫವಾಗಿ ಕಧುವಾ ರೇಷ್ಮೆ ಸೀರೆ ತಯಾರಾಗಿದೆ. ಈ ಸೀರೆಯ ಒಟ್ಟು ವೆಚ್ಚ ರು.1.5 ಲಕ್ಷ. ಇದರ ತೂಕ 400 ಗ್ರಾಂ. `ಭಾರತದ ಸಾಂಪ್ರದಾಯಿಕ ರೇಷ್ಮೆ ಸೀರೆಯನ್ನು ಮೂವರು ನೇಕಾರರು ನೇಯ್ದಿದ್ದು, ಶನಿವಾರವಷ್ಟೇ ನವದೆಹಲಿಗೆ ಕಳುಹಿಸಲಾಗಿತ್ತು' ಎಂದು ಹೇಳಿದ್ದಾರೆ ವಾರಾಣಸಿಯ ಉದ್ಯಮಿ ಅಬ್ದುಲ್ ಮತೀನ್. ಕಧುವಾ ಸೀರೆಯು ಅತ್ಯಂತ ಅಪರೂಪದ್ದಾಗಿದ್ದು, ಕೈಯಲ್ಲೇ ನೇಯಲಾಗುತ್ತದೆ.

ಇದನ್ನು ಸಿದ್ಧಪಡಿಸಲು 3-4 ತಿಂಗಳು ಬೇಕು. ಇಷ್ಟೊಂದು ಸೂಕ್ಷ್ಮ ಹಾಗೂ ನವಿರಾದ ರೇಷ್ಮೆ ಸೀರೆ ತಯಾರಿಸುವ ನೇಕಾರರ ಪರಿಣತಿ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆಯುವ ಉದ್ದೇಶದಿಂದಲೇ ಮಿಶೆಲ್‍ಗೆ ಈ ಉಡುಗೊರೆ ನೀಡಲಾಗುತ್ತಿದೆ ಎಂದೂ ಹೇಳಿದ್ದಾರೆ ಮತೀನ್. ವಾರಾಣಸಿ ವಸ್ತ್ರ ಉದ್ಯೋಗ ಸಂಘವು ಇನ್ನೂ 100 ರೇಷ್ಮೆ ಸೀರೆಗಳನ್ನು ನವದೆಹಲಿಗೆ ಕಳುಹಿಸಿದ್ದು, ಇವೆಲ್ಲವನ್ನೂ ಮಿಶೆಲ್‍ಗೆ ಉಡುಗೊರೆಯಾಗಿ ನೀಡುವಂತೆ ಕೇಳಿಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com