ನವ ಸಂಬಂಧದ ಸಸಿ ನೆಟ್ಟ ಒಬಾಮ

ಭಾರತಕ್ಕೆ 3 ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಭಾನುವಾರ ಮಹಿಳಾ ವಿಂಗ್ ಕಮಾಂಡರ್ ನೇತೃತ್ವದಲ್ಲಿ ಗೌರವ ವಂದನೆ ನೀಡಿದ್ದು ವಿಶೇಷ!
ರಾಜ್ ಘಾಟ್ ನಲ್ಲಿರುವ ಮಹಾತ್ಮಗಾಂಧಿ ಸಮಾಧಿ ಬಳಿ ಸಸಿ ನೆಟ್ಟ ಬರಾಕ್ ಒಬಾಮ
ರಾಜ್ ಘಾಟ್ ನಲ್ಲಿರುವ ಮಹಾತ್ಮಗಾಂಧಿ ಸಮಾಧಿ ಬಳಿ ಸಸಿ ನೆಟ್ಟ ಬರಾಕ್ ಒಬಾಮ
Updated on

ಭಾರತಕ್ಕೆ 3 ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಭಾನುವಾರ ಮಹಿಳಾ ವಿಂಗ್ ಕಮಾಂಡರ್ ನೇತೃತ್ವದಲ್ಲಿ ಗೌರವ ವಂದನೆ ನೀಡಿದ್ದು ವಿಶೇಷ!

ಈ ಬಾರಿಯ ಗಣರಾಜ್ಯೋತ್ಸವದ ಘೋಷಣೆಯೇ ನಾರಿ ಶಕ್ತಿ. ಹಾಗಾಗಿ ವಿಶ್ವದ ಅತಿ ಪ್ರಭಾವಿ ನಾಯಕನಿಗೆ ಸಲ್ಲಿಕೆಯಾದ ಗೌರವ ವಂದನೆ ಹಾಗೂ 21 ಗನ್‍ಗಳ ಸೆಲ್ಯೂಟ್ ಪ್ರಕ್ರಿಯೆ ಕಮಾಂಡಿಂಗ್ ಅಧಿಕಾರಿಯಾಗಿ ಪೂಜಾ ಠಾಕೂರ್ ಅವರನ್ನು ಆಯ್ಕೆ ಮಾಡಲಾಗಿತ್ತು. ವಿದೇಶಿ ಅತಿಥಿಗಳಿಗೆ ಈ ರೀತಿ ಸೇನೆಯ ಮೂರೂ ಪಡೆಗಳಿಂದ ಗೌರವ ವಂದನೆ ಸಲ್ಲಿಸುವುದು ಅಪರೂಪದಲ್ಲಿ ಅಪರೂಪ. ಅಂಥದ್ದರಲ್ಲಿ ಇಂಥ ಅಪರೂಪದ ಗೌರವವಂದನೆ ಸಲ್ಲಿಕೆ ಕಾರ್ಯದ ನೇತೃತ್ವ ವಹಿಸಿದ ದೇಶದ ಮೊದಲ ಮಹಿಳಾ ಅಧಿಕಾರಿ ಎನ್ನುವ ಗೌರವಕ್ಕೆ ಪೂಜಾ ಪಾತ್ರವಾದರು.

ಹೆಮ್ಮೆಯ ಕ್ಷಣ
ಅಮೆರಿಕ ಅಧ್ಯಕ್ಷರಿಗೆ ಗೌರವ ವಂದನೆ ಸಲ್ಲಿಸುವ ಕಾರ್ಯಕ್ರಮದ ಕಮಾಂಡಿಂಗ್ ಆಫಿಸರ್ ಆಗಿ ಕರ್ತವ್ಯ ನಿರ್ವಹಿಸಿದ ಮೊದಲ ಮಹಿಳಾ ಅಧಿಕಾರಿ ಪೂಜಾ ಠಾಕೂರ್ ಈಗ ಆಕರ್ಷಣೆಯ ಕೇಂದ್ರವಾಗಿದ್ದಾರೆ. ಇಂಥ ಅಪರೂಪದ ಅವಕಾಶ ತಮಗೆ ಸಿಕ್ಕಿದ್ದಕ್ಕಾಗಿ ಪೂಜಾ ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ವಿಶ್ವದ ಅತಿ ಪ್ರಬಲ ನಾಯಕನೊಬ್ಬನಿಗೆ ಗೌರವ ವಂದನೆ ಸಲ್ಲಿಕೆ ಕಾರ್ಯದ ನೇತೃತ್ವ ವಹಿಸುವ ಮೂಲಕ ವಾಯುಸೇನೆ ಹೊಸ ಇತಿಹಾಸ ದಾಖಲಿಸಿದೆ. ಈ ಕಾರ್ಯದ ಕಮಾಂಡಿಂಗ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿದ್ದು ನನಗೆ ಹಾಗೂ ವಾಯುಸೇನೆ ಪಾಲಿಗೆ ಹೆಮ್ಮೆಯ ಕ್ಷಣ ಎಂದಿದ್ದಾರೆ ವಿಂಗ್ ಕಮಾಂಡರ್ ಪೂಜಾ.

ಶಾಂತಿಯ ಸ್ಫೂರ್ತಿ!

ಅಂದು ಡಾ. ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದು ಇಂದಿಗೂ ಸತ್ಯ. ಗಾಂಧೀಜಿ ಅವರ ಸ್ಫೂರ್ತಿಯ ಚಿಲುಮೆ ಭಾರತದಲ್ಲಿ ಇಂದಿಗೂ ಜೀವಂತವಾಗಿದೆ. ಇದು ವಿಶ್ವಕ್ಕೆ ನೀಡಿದ ಅತಿದೊಡ್ಡ ಕೊಡುಗೆಯಾಗಿದೆ. ವಿಶ್ವದ ಎಲ್ಲ ರಾಷ್ಟ್ರಗಳೊಂದಿಗೆ ಮತ್ತು ಜನರೊಂದಿಗೆ ನಾವು ಇದೇ ಪ್ರೀತಿ ಮತ್ತು ಶಾಂತಿಯ ಸ್ಪೂರ್ತಿಯೊಂದಿಗೆ ಬದುಕುವಂತಾಗಬೇಕು. ಒಬಾಮ ಬರೆದದ್ದು...

ರಾಷ್ಟ್ರಪಿತನಿಗೆ ಹಿರಿಯಣ್ಣನ ಗೌರವ!
ಮೂರು ದಿನಗಳ ಭಾರತ ಭೇಟಿಯಲ್ಲಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ರಾಜ್ ಘಾಟ್‍ನಲ್ಲಿರುವ ರಾಷ್ಟ್ರಪಿತ ಮಹತ್ಮಾಗಾಂಧೀಜಿ ಅವರ ಸಮಾಧಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದರು. ಮಹತ್ಮಾಗಾಂಧಿ ಅವರ ಜೀವನ, ಚಿಂತನೆಗಳಿಂದ ತಾವು ಸಾಕಷ್ಟು ಪ್ರಭಾವಿತರಾಗಿರುವ ಒಬಾಮ ಅವರ ಪಾಲಿಗೆ ಈ ಭೇಟಿ ಅವಿಸ್ಮರಣೀಯ ಕ್ಷಣ. ರಾಷ್ಟ್ರಪತಿ ಭವನದಲ್ಲಿ  ಗೌರವ ವಂದನೆ ಸ್ವೀಕರಿಸಿದ ಬಳಿಕ ನೇರವಾಗಿ ರಾಜಘಾಟ್‍ಗೆ ತೆರಳಿದ ಅವರು ರಾಷ್ಟ್ರಪಿತನ ಸಮಾಧಿಗೆ ಹೂಗುಚ್ಛ ಅರ್ಪಿಸಿದರು.

ಈ ವೇಳೆ ಎರಡೂ ಕೈ ಜೋಡಿಸಿ ತಲೆಬಾಗಿ ವಿಶ್ವ ಶಾಂತಿ ಧೂತನಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು. ಈ ವೇಳೆ ಪ್ರಧಾನಿ ಮೋದಿ ಅವರು ಒಬಾಮಗೆ ಜತೆಯಾಗುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಒಬಾಮ ಅವರಿಗೆ ಜತೆ ನೀಡಿದ್ದು ಸಚಿವ ರವಿಶಂಕರ್ ಪ್ರಸಾದ್ ಹಾಗೂ ಮಹಾತ್ಮಾಗಾಂಧಿ ಸ್ಮಾರಕದ ಅಧಿಕಾರಿಗಳಷ್ಟೆ. 2010ರಲ್ಲಿ ದೆಹಲಿಗೆ ಭೇಟಿ ನೀಡಿದ್ದ ವೇಳೆಯೂ ಒಬಾಮ ರಾಷ್ಟ್ರಪಿತನಿಗೆ ಶ್ರದ್ಧಾಂಜಲಿ ಅರ್ಪಿಸಿದ್ದನ್ನು ಸ್ಮರಿಸಬಹುದು. ನಮಸ್ತೆ ಅಂದ ಒಬಾಮ!

ರಾಷ್ಟ್ರಪತಿ ಭವನದಲ್ಲಿ ನೀಡಲಾದ ಗೌರವವಂದನೆ ಹಾಗೂ ಆತಿಥ್ಯಕ್ಕೆ ಬರಾಕ್ ಒಬಾಮ ಖುಷಿಯಾಗಿದ್ದಾರೆ. ಇಂಥ ವಿಶೇಷ ಆತಿಥ್ಯಕ್ಕೆ ನಾನು ಆಭಾರಿ ಎಂದಿದ್ದಾರೆ ಅವರು. ಈ ವೇಳೆ ಅವರು ರಾಷ್ಟ್ರಪತಿ ಭವನದಲ್ಲಿ ತಮ್ಮನ್ನು ಎದುರಾದ ಗಣ್ಯರಿಗೆ ಕೈಮುಗಿದು `ನಮಸ್ತೆ' ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. ಮಹಾತ್ಮಾ ಗಾಂಧಿ ಅವರ ಸಮಾಧಿ ರಾಜ್‍ಘಾಟ್‍ಗೆ ಭೇಟಿ ನೀಡಿದ ಒಬಾಮ ಅವರು ಸಂಪ್ರದಾಯದಂತೆ ಸಸಿ ನೆಟ್ಟರು.

ಭಾರತೀಯ ವಿನ್ಯಾಸಗಾರನ ವಸ್ತ್ರದಲ್ಲಿ ಮಿಂಚಿದ ಮಿಶೆಲ್ ಅಮೆರಿಕ ಅಧ್ಯಕ್ಷರ ಪತ್ನಿ ಮಿಶೆಲ್ ಅವರು ಭಾರತೀಯ ವಿನ್ಯಾಸಗಾರನೇ ರಚಿಸಿದ ಉಡುಪು ತೊಟ್ಟು ಭಾರತದ ನೆಲದಲ್ಲಿ ಕಾಲಿಟ್ಟಿದ್ದು ವಿಶೇಷವಾಗಿತ್ತು. ಮೊಣಕಾಲಿನವರೆಗೆ ಬರುವ, ಹೂಗಳ ಚಿತ್ರವುಳ್ಳ ಉಡುಗೆಯನ್ನು ತೊಟ್ಟು ಮಿಶೆಲ್ ಮಿಂಚಿದರು. ಇದರ ವಿನ್ಯಾಸಗಾರ ಒಡಿಶಾದ ರೂರ್ಕೆಲಾದವರಾದ ಬಿಭು ಮೊಹಾಪಾತ್ರ.

ಸದ್ಯ ಅವರು ನ್ಯೂಯಾರ್ಕ್ ನಲ್ಲಿದ್ದಾರೆ. ಮಿಶೆಲ್ ಅವರು ತಾವೇ ವಿನ್ಯಾಸಗೊಳಿಸಿದ ವಸ್ತ್ರವನ್ನು ಧರಿಸಿದ್ದಾಗಿ ಸ್ವತಃ ಮೊಹಾಪಾತ್ರ ಅವರು ಟ್ವೀಟ್ ಮಾಡಿದ್ದು, ಮಿಶೆಲ್‍ರ ಫೋಟೋವನ್ನೂ ಅಪ್‍ಲೋಡ್ ಮಾಡಿದ್ದಾರೆ. ವಿಶೇಷ ವಿಮಾನ ಏರ್ ಫೋರ್ಸ್ ಒನ್‍ನಿಂದ ಇಳಿದು ಬರುವಾಗ ಮಿಶೆಲ್ ಇದೇ ಉಡುಪು ಧರಿಸಿದ್ದು, ಅದಕ್ಕೆ ಸರಿಯಾಗಿ ಹೊಂದುವ ಕೋಟ್ ಮತ್ತು ಕಪ್ಪು ಬಣ್ಣದ ಶೂ ಧರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com