ರಾಜ್ ಪಥ್ ಐತಿಹಾಸಿಕ ಪರೇಡ್ ಗೆ ವಿದ್ಯುಕ್ತ ತೆರೆ

ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಜಧಾನಿ ನವದೆಹಲಿಯ ರಾಜ್ ಪಥ್ ನಲ್ಲಿ ನಡೆದ ಪಥಸಂಚಲನ ಅಂತ್ಯಗೊಂಡಿದ್ದು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು..
ಭಾರತದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ
ಭಾರತದ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ರಾಜಧಾನಿ ನವದೆಹಲಿಯ ರಾಜ್ ಪಥ್ ನಲ್ಲಿ ನಡೆದ ಪಥಸಂಚಲನ ಅಂತ್ಯಗೊಂಡಿದ್ದು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ವಿದ್ಯುಕ್ತ ತೆರೆ ಎಳೆಯಲಾಯಿತು.

ಇಡೀ ವಿಶ್ವವೇ ಗಮನಿಸುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಮತ್ತು ಅವರ ಪತ್ನಿ ಮಿಶೆಲ್ ಒಬಾಮಾ ಅವರು ಸಾಕ್ಷಿಯಾಗಿದ್ದರು. ಭಾರತೀಯ ಸೇನೆಯ ವಿವಿಧ ದಳಗಳಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಗೌರವ ವಂದನೆ ಸ್ವೀಕರಿಸಿದರು. ಬಳಿಕ ಭಾರತೀಯ ಸೇನೆಯ ವಿವಿಧ ದಳಗಳು ತಮ್ಮ ಶಕ್ತಿ ಪ್ರದರ್ಶನ ತೋರಿದವು.

ಭಾರತೀಯ ಸೈನ್ಯದ ಲೇಸರ್‌ ನಿಯಂತ್ರಿತ ಮಿಸೈಲ್‌ ಸಾಮರ್ಥ್ಯದ ಟಿ-90 ಭೀಷ್ಮ ಯುದ್ಧ ಟ್ಯಾಂಕರ್, ಇನ್‌ಫೆಂಟ್ರಿ ಯುದ್ಧ ವಾಹನಗಳು ಪಥಸಂಚಲನದ ವಿಶೇಷ ಆಕರ್ಷಣೆಗಳಾಗಿದ್ದವು. ಇನ್ನು ನೆಲದಿಂದ ಆಗಸಕ್ಕೆ ಚಿಮ್ಮುವ ದೇಶಿಯವಾಗಿ ಅಭಿವೃದ್ಧಿಗೊಳಿಸಲಾಗಿರುವ ಮಧ್ಯಮ ವ್ಯಾಪ್ತಿಯ "ಆಕಾಶ್‌" ಕ್ಷಿಪಣಿಯನ್ನು ಹೊತ್ತು ಡಿಆರ್ ಡಿಒ ತಂಡದ ಸಿಬ್ಬಂಧಿ ರಾಜಪಥದಲ್ಲಿ ಸಾಗಿದರು.

ಮಹಿಳಾ ಸೇನೆಯ ತಾಕತ್ತು ಪ್ರದರ್ಶನ

ಇನ್ನು ಇದೇ ಮೊದಲ ಬಾರಿಗೆ ವಾಯು, ಜಲ ಮತ್ತು ಭೂಸೇನೆಯ ಮಹಿಳಾ ಪಡೆಗಳಿಂದ ಪ್ರಪ್ರಥಮ ಬಾರಿಗೆ ಪಥ ಸಂಚಲನ ನಡೆಸಲಾಯಿತು.ಲೆಫ್ಟಿನೆಂಟ್ ಕಮಾಂಡೆರ್ ಸಂಧ್ಯಾ ಚೌಹಣ್ ನೇತೃತ್ವದ ನೌಕಾಪಡೆಯ ಮಹಿಳಾ ವಿಭಾಗವು ಪಥಸಂಚಲನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಗಾಳಿಯಲ್ಲಿ ತಾಕತ್ತು ಪ್ರದರ್ಶಿಸಿದ ವಾಯು ಸೇನೆ
ಇನ್ನು ಇದೇ ವೇಳೆ ನಡೆದ ವೈಮಾನಿಕ ಪ್ರದರ್ಶನದಲ್ಲಿ ಭಾರತೀಯ ವಾಯು ದಳದ ಅತ್ಯಾಧುನಿಕ ಯುದ್ಧವಿಮಾನಗಳು ಮತ್ತು ಹೆಲಿಕಾಪ್ಟರ್ ಗಳು ನೆರೆದಿದ್ದವರಿಗೆ ತಮ್ಮ ತಾಕತ್ತು ಪ್ರದರ್ಶನ ಮಾಡಿದವು. ಮುಖ್ಯವಾಗಿ ಜಾಗ್ವಾರ್ ಯುದ್ಧ ವಿಮಾನಗಳು, ಟೈಗರ್ ಹೆಲಿಕಾಪ್ಟರ್ ಗಳು, ಎಂಐ81 ಹೆಲಿಕಾಪ್ಟರ್ ಗಳು, ಮಿಗ್ ಸರಣಿಯ ಲಘು ಯುದ್ಧ ವಿಮಾನಗಳು ಸೇರಿದಂತೆ ಹಲವು ಅತ್ಯಾಧುನಿಕ ಯುದ್ಧ ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದವು.

ದೀರ್ಘಾವಧಿ ಸಮುದ್ರದಾಳದಲ್ಲಿ ಕಾರ್ಯಾಚರಿಸಬಲ್ಲ ಹಾಗೂ ಆ್ಯಂಟಿ - ಸಬ್‌ಮೆರಿಯನ್‌ ಪಿ-81 ಯುದ್ಧ ವಿಮಾನಗಳು ಮತ್ತು ಸುಧಾರಿತ ಮಾದರಿಯ ಮಿಗ್‌ -29ಕೆ ಯುದ್ಧವಿಮಾನಗಳು ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಪಿನಾಕ ಬಹುವಿಧ ರಾಕೆಟ್‌ ಲಾಂಛರ್‌ಗಳು, ಬೆಂಗಳೂರು ಎಚ್‌ಎಎಲ್‌ನಲ್ಲಿ ನಿರ್ಮಿಸಲಾದ ಅತ್ಯಾಧುನಿಕ ಲಘು ಸೇನಾ ಹೆಲಿಕ್ಯಾಪ್ಟರ್‌ಗಳು ಗಮನ ಸೆಳೆದವು.

ಇದಕ್ಕೆ ಮೊದಲು, ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿ ಮಡಿದ ಮೇಜರ್ ಮುಕುಂದ್ ವರದರಾಜನ್ ಹಾಗೂ ನಾಯ್ಕ್ ನೀರಜ್ ಕುಮಾರ್ ಸಿಂಗ್ ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮರಣೋತ್ತರವಾಗಿ ಅಶೋಕ ಚಕ್ರ ಪುರಸ್ಕಾರ ನೀಡಿದರು. ಕಾರ್ಯಕ್ರಮ ಆರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಯಲ್ಲಿ ದೇಶ ರಕ್ಷಣೆಯಲ್ಲಿ ಕೈಂಕರ್ಯದಲ್ಲಿ ಬಲಿದಾನಗೈದ ಯೋಧರಿಗೆ ಗೌರವ ವಂದನೆ ಸಲ್ಲಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com