
ನವದೆಹಲಿ: ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್‌ಗೆ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರು ನೋಟಿಸ್ ನೀಡಿರುವ ವಿರುದ್ಧ ಆಮ್ ಆದ್ಮಿ ಪಕ್ಷ ಕಿಡಿಕಾರಿದ್ದು, ಬಿಜೆಪಿಯನ್ನು 'ಭಾರತೀಯ ನೋಟಿಸ್ ಪಾರ್ಟಿ' ಎಂದು ವ್ಯಂಗ್ಯವಾಡಿದೆ.
ಬಿಜೆಪಿ ನೋಟಿಸ್ ಕುರಿತಂತೆ ಇಂದು ದೆಹಲಿಯಲ್ಲಿ ಮಾತನಾಡಿರುವ ಆಪ್ ಮುಖಂಡ ಸಂಜಯ್ ಸಿಂಗ್ ಅವರು, 'ಬಿಜೆಪಿ ಮುಖಂಡರಿಗೆ ಮಾಡಲು ಬೇರೇನೂ ಕೆಲಸವಿಲ್ಲ. ಹೀಗಾಗಿ ಸುಖಾಸುಮ್ಮನೆ ನೋಟಿಸ್ ನೀಡುತ್ತಿದ್ದಾರೆ. ಈ ಹಿಂದೆ ನಿತಿನ್ ಗಡ್ಕರಿ ಅವರು, ಆರ್‌ಪಿಸಿಂಗ್ ಅವರು, ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ ಅವರು ನೋಟಿಸ್ ನೀಡಿದ್ದರು. ಈಗ ಕಿರಣ್ ಬೇಡಿ ಅವರ ಸರದಿಯಷ್ಟೇ, ಅವರಿಗೂ ಬಿಜೆಪಿ ಅವರು ನೋಟಿಸ್ ಕಳುಹಿಸುವ ಕುರಿತು ಪಾಠ ಹೇಳಿಕೊಟ್ಟಿರಬೇಕು. ಹೀಗಾಗಿ ಅವರು ನೋಟಿಸ್ ನೀಡಿದ್ದಾರೆ' ಎಂದು ಅವರು ಹೇಳಿದರು.
ಅಲ್ಲದೆ 'ಬನಾರಸ್‌ನಲ್ಲಿ ಬಿಜೆಪಿ ಕೂಡ ಎಎಪಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಪ್ರಕಟಿಸುತ್ತಿದ್ದು, ತನ್ನ ಸಾಮಾಜಿಕ ಜಾಲತಾಣದಲ್ಲಿ ಕೇಜ್ರಿವಾಲ್ ಅವರ ಭಾವಚಿತ್ರವನ್ನು ಬಳಕೆ ಮಾಡಿದೆ. ಅಲ್ಲದೆ ಅವರನ್ನು ತೀಕ್ಷ್ಣವಾಗಿ ಟೀಕಿಸಿದೆ. ಇದನ್ನು ಯಾರನ್ನು ಕೇಳಿ ಬಿಜೆಪಿ ಮಾಡಿತ್ತು. ನಮ್ಮನ್ನು ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಹೀಗಾಗಿ ನೋಟಿಸ್ ನೀಡುತ್ತಿದೆ. ನಾವು ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ' ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಆಪ್ ಪಕ್ಷ ಪ್ರಕಟಿಸಿರುವ ಪೋಸ್ಟರ್‌ಗಳು ವಿವಾದಕ್ಕೆ ಕಾರಣವಾಗಿದ್ದು, ಪೋಸ್ಟರ್ ವಿರುದ್ಧ ಬಿಜೆಪಿ ಕಾನೂನು ಕ್ರಮಕ್ಕೆ ಮುಂದಾಗಿದೆ. ಎಎಪಿಯ ವಿವಾದಿತ ಪೋಸ್ಟರ್‌ನಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಅವರ ಭಾವಚಿತ್ರಗಳಿರುವ ಪೋಸ್ಟರ್‌ಗಳನ್ನು ಬಳಕೆ ಮಾಡಲಾಗುತ್ತಿದೆ.
'ನಿಷ್ಟಾವಂತ ಅರವಿಂದ್ ಕೇಜ್ರಿವಾಲ್ ಬೇಕೋ ಅಥವಾ ಅವಕಾಶವಾದಿ ಕಿರಣ್ ಬೇಡಿ ಅವರು ಬೇಕೋ ಎಂದು ನೀವೇ ನಿರ್ಧರಿಸಿ' ಎಂಬ ವಿವಾದಾತ್ಮಕ ಪೋಸ್ಟರ್‌ಗಳನ್ನು ಆಟೋಗಳ ಹಿಂಬದಿಯಲ್ಲಿ ಅಂಟಿಸಿ ಎಎಪಿ ಪ್ರಚಾರ ಮಾಡುತ್ತಿದೆ. ಇದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದು, ಇದೀಗ ಆಮ್ ಆದ್ಮಿ ಪಕ್ಷದ ವಿರುದ್ಧ ಕಾನೂನು ಕ್ರಮ ಜರುಗಿಸಲು ಬಿಜೆಪಿ ಮುಂದಾಗಿದೆ.
Advertisement