
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಜಂಟಿ ಭಾಷಣ ಕಾರ್ಯಕ್ರಮ 'ಮನ್ ಕಿ ಬಾತ್' ಆಕಾಶವಾಣಿಯಲ್ಲಿ ಪ್ರಸಾರವಾಗಿದ್ದು, ಜಾಗತಿಕ ಮಟ್ಟದಲ್ಲಿ ಒಗ್ಗೂಡಿ ಕೆಲಸ ಮಾಡುವುದಾಗಿ ಉಭಯ ನಾಯಕರು ಘೋಷಿಸಿದ್ದಾರೆ.
ಭಾಷಣವನ್ನು ನಮಸ್ತೆ ಎಂದು ಆರಂಭಿಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಭಾರತ ಸರ್ಕಾರದ ಮಹಿಳಾ ಸಬಲೀಕರಣ ಕ್ರಮಗಳನ್ನು ಹಾಡಿಹೊಗಳಿದ್ದಾರೆ. 'ಮಹಿಳಾ ಸಬಲೀಕರಣ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ನಡೆ ಮತ್ತು ಕ್ರಮಗಳು ಪ್ರಶಂಸನೀಯವಾಗಿದೆ. ಅಮೆರಿಕ ರಾಷ್ಟ್ರವು ಭಾರತದೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಸಹಯೋಗ ಬಯಸುತ್ತದೆ. ನನಗೆ ಭಾರತ ಮತ್ತು ಅಮೆರಿಕದ ಮೇಲೆ ಭರವಸೆ ಇದೆ. ಜಾಗತಿಕ ಮಟ್ಟದಲ್ಲಿ ಎರಡೂ ದೇಶಗಳು ಒಗ್ಗೂಡಿ ಕೆಲಸ ಮಾಡಲಿದೆ'.
'ಭಾರತ ಮತ್ತು ಅಮೆರಿಕ ರಾಷ್ಟ್ರಗಳು ಸ್ವಾಭಾವಿಕ ಸ್ನೇಹಿತರಾಗಿದ್ದು, ಜಾಗತಿಕ ಮಟ್ಟದಲ್ಲಿ ಒಗ್ಗೂಡಿ ಕೆಲಸ ಮಾಡುವ ವಿಶ್ವಾಸವಿದೆ. ಉಭಯ ದೇಶಗಳಲ್ಲಿ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಣೆ ಆಗಬೇಕಿದ್ದು, ಉತ್ತಮ ಆರೋಗ್ಯ ಉತ್ತಮ ಅರ್ಥ್ಯವ್ಯವಸ್ಥೆಗೆ ಬೆನ್ನೆಲುಬಿದ್ದಂತೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎಬೋಲಾ ಮತ್ತು ಪೋಲಿಯೋ ಖಾಯಿಲೆಗಳ ಬಗ್ಗೆ ಚರ್ಚಿಸಿದ್ದೇನೆ. ಸ್ಥೂಲಕಾಯ ಸಮಸ್ಯೆ ಇಡೀ ವಿಶ್ವಕ್ಕೆ ತಲೆನೋವಾಗಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಪ್ರಧಾನಿ ಮೋದಿ ಅವರ ಆರೋಗ್ಯ ಸುಧಾರಣಾ ಕ್ರಮಗಳು ಉತ್ತಮವಾಗಿದೆ'.
'ಪತ್ನಿ ಮಿಶೆಲ್ ಬಗ್ಗೆ ನನಗೆ ಹೆಮ್ಮೆ ಇದ್ದು, ಆಕೆಯ ಕೆಲ ಗುಣಗಳಿಂದಾಗಿ ನಾನು ಸಾಕಷ್ಟು ಪ್ರಭಾವಿತಗೊಂಡಿದ್ದೇನೆ. ನನ್ನ ಮಕ್ಕಳು ಭಾರತದ ಇತಿಹಾಸದಿಂದ ಪ್ರಭಾವಿತರಾಗಿದ್ದಾರೆ. ಭವಿಷ್ಯದಲ್ಲಿ ನಾನು ಮತ್ತೆ ಭಾರತ ಪ್ರವಾಸ ಮಾಡಬಹುದು' ಎಂದು ಒಬಾಮ ಹೇಳಿದರು.
ಶ್ವೇತಭವನಕ್ಕೆ ಹೋಗುತ್ತೇನೆ ಎಂದು ಭಾವಿಸಿರಲಿಲ್ಲ: ಪ್ರಧಾನಿ ಮೋದಿ
ಇನ್ನು ಇದೇ ವೇಳೆ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ನಾನು ಭಾರತದ ಪ್ರಧಾನಿಯಾಗುತ್ತೇನೆ. ಶ್ವೇತಭವನಕ್ಕೆ ಹೋಗುತ್ತೇನೆ ಎಂದು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ.
'ಭಾರತ ದೇಶದ ನಿವಾಸಿಗಳು ಬರಾಕ್ ಒಬಾಮ ಅವರಿಗೆ ಮತ್ತು ನನಗೆ ಉತ್ತಮ ಪ್ರಶ್ನೆಗಳನ್ನು ಕೇಳಿದ್ದಾರೆ. ರಾಜಕೀಯ ಮತ್ತು ವಿದೇಶಾಂಗ ನೀತಿಗಳು ಸೇರಿದಂತೆ ಹಲವು ಉತ್ತಮ ಪ್ರಶ್ನೆಗಳನ್ನು ಕೇಳಿದ್ದಾರೆ. ಕೆಲ ಪ್ರಶ್ನೆಗಳು ಮನಸ್ಸಿಗೆ ನಾಟುವಂತಿದ್ದವು. ನನಗೆ ಸಂಬಂಧಗಳು ತುಂಬಾ ಮಹತ್ವದ್ದಾಗಿದೆ. ನಾನು ಎಂದಿಗೂ ಭಾರತದ ಪ್ರಧಾನಿಯಾಗುತ್ತೇನೆ ಎಂದು ಭಾವಿಸಿರಲಿಲ್ಲ. ಶ್ವೇತಭವನಕ್ಕೆ ಹೋಗುತ್ತೇನೆ ಎಂದು ಕನಸು ಕಂಡಿರಲಿಲ್ಲ. ನನಗೆ ಸ್ವಾಮಿ ವಿವೇಕಾನಂದರೇ ಸ್ಫೂರ್ತಿ. ಬೆಂಜಮಿನ್ ಫ್ರಾಂಕ್ಲಿನ್‌ರಿಂದ ನಾನು ಪ್ರಭಾವಿತನಾಗಿದ್ದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬೇಟಿ ಬಚಾವೋ, ಬೇಟಿ ಪಡಾವೋ ನಮ್ಮ ಜವಾಬ್ದಾರಿಯಾಗಿದ್ದು, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ನಮ್ಮ ಕರ್ತವ್ಯವಾಗಿದೆ. ಜೀವನದಲ್ಲಿ ಏನೋ ಆಗುವ ಕನಸು ಕಟ್ಟಬೇಡಿ. ಸಾಧಿಸುವ ಕನಸು ಕಾಣಿ. ಆಗ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಪ್ರಧಾನಿ ಮೋದಿ ಕಿವಿಮಾತು ಹೇಳಿದ್ದಾರೆ.
ಇನ್ನು ಬರಾಕ್ ಹೆಸರಿನ ಹಿಂದಿರುವ ಸ್ವಾರಸ್ಯದ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬರಾಕ್ ಎಂದರೆ ದೇವರ ಆಶೀರ್ವಾದ ಪ್ರಾಪ್ತಿಯಾದವ ಎಂದರ್ಥ. ಬರಾಕ್ ಒಬಾಮ ಅವರನ್ನು ಮತ್ತೆ ಭಾರತ ಪ್ರವಾಸ ಕೈಗೊಳ್ಳುವಂತೆ ಆಹ್ವಾನಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.
Advertisement