ಗಣರಾಜ್ಯೋತ್ಸವಕ್ಕೆ ಒಬಣ್ಣ

ಗಣರಾಜ್ಯೋತ್ಸವದ ಆಚರಣೆಯಲ್ಲಿ  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಪ್ರಧಾನಿ ನರೇಂದ್ರ ಮೋದಿ.
ಗಣರಾಜ್ಯೋತ್ಸವದ ಆಚರಣೆಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಪ್ರಧಾನಿ ನರೇಂದ್ರ ಮೋದಿ.

ಈ ಬಾರಿಯ ಗಣರಾಜ್ಯೋತ್ಸವದ ನಿಜವಾದ ಆಕರ್ಷಣೆಯೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಪ್ರಧಾನಿ ನರೇಂದ್ರ ಮೋದಿ. ಈ ಇಬ್ಬರು ದಿಗ್ಗಜರು ರಾಜಪಥಕ್ಕೆ ಆಗಮಿಸಿದಾಗ ನೆರೆದಿದ್ದ ಸಾವಿರಾರು ಮಂದಿ ಕೈಬೀಸಿ ಅಭೂತಪೂರ್ವ ಸ್ವಾಗತ ನೀಡಿದರು.

ಇಂಡಿಯಾ ಗೇಟ್‍ನಲ್ಲಿರುವ ಸೈನಿಕರ ಸ್ಮಾರಕಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ನೇರವಾಗಿ ರಾಜಪಥ್‍ಗೆ ಆಗಮಿಸಿದ ಮೋದಿ ಅವರನ್ನು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಸ್ವಾಗತಿಸಿದರು.

ಬೆನ್ನಲ್ಲೇ ಒಬಾಮ ಪತ್ನಿ ಮಿಶೆಲ್ ಜತೆಗೆ `ಬೀಸ್ಟ್' ಕಾರಿನಲ್ಲಿ ಆಗಮಿಸಿದರು. ಇಬ್ಬರನ್ನೂ ಖುದ್ದಾಗಿ ಸ್ವಾಗತಿಸಿದ ಮೋದಿ ನಂತರ ವಿವಿಐಪಿ ಗ್ಯಾಲರಿಗೆ ಕರೆದೊಯ್ದರು. ಸಂಭ್ರಮದಲ್ಲಿ ಪಾಲ್ಗೊಂಡ ಅಮೆರಿಕದ ಮೊದಲ ಅಧ್ಯಕ್ಷ ಒಬಾಮ. ಜತೆಗೆ, ಭಾರತಕ್ಕೆ ಎರಡನೇ ಬಾರಿ ಭೇಟಿ ನೀಡಿದ ಅಮೆರಿಕದ ಮೊದಲ ಅಧ್ಯಕ್ಷರು ಸಹ. ಒಬಾಮ ಮತ್ತು ಮೋದಿ ಅಕ್ಕಪಕ್ಕ ಕೂತಿದ್ದರೆ, ಮಿಶೆಲ್ ಪಕ್ಕ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಕೂಡ ಇದ್ದರು.

ಬೈಕ್ ಸಾಹಸಕ್ಕೆ ಬಹುಪರಾಕ್

ಬಿಎಸ್‍ಎಫ್ ಯೋಧರ ಸಾಹಸ ಪರೇಡ್‍ನ ಆಕರ್ಷಣೆಗಳಲ್ಲೊಂದು. ಯೋಧರ ಈ ಮೈನವಿರೇಳಿಸುವ ಸಾಹಸಕ್ಕೆ ಒಬಾಮ ಹಾಗೂ ಅವರ ಪತ್ನಿ ಮಿಶೆಲ್ ಕೂಡ
ಮಾರುಹೋದರು. ಯೋಧರ ಈ ರೋಮಾಂಚಕ ಸಾಹಸ ಪ್ರದರ್ಶನವನ್ನು ಬೆರಗುಗಣ್ಣುಗಳಿಂದ ವೀಕ್ಷಿಸಿದ ದಂಪತಿ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು. ಒಬಾಮ
ಅವರಂತು ಥಮ್ಸ್ ಅಪ್ (ಹೆಬ್ಬೆರಳು ತೋರಿಸು) ಮಾಡುವ ಮೂಲಕ ತಮ್ಮ ಭಾವನೆ ಹೊರಗೆಡವಿದರು.

ಬಬಲ್‍ಗಮ್ ಜಗಿದ ಒಬಾಮ

ಗಣರಾಜ್ಯೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿ ಆಗಿದ್ದ ಒಬಾಮ ಕಾರ್ಯಕ್ರಮದುದ್ದಕ್ಕೂ ಚ್ಯೂಯಿಂಗ್‍ಗಮ್  ಜಗಿಯುತ್ತಿದ್ದರು. ಪಕ್ಕದಲ್ಲೇ ಕೂತಿದ್ದ ಮೋದಿ ಅವರು
ಮಾತನಾಡಲು ಮುಂದಾದಾಗ ಚ್ಯೂಯಿಂಗ್ ಗಮ್ ಅನ್ನು ಬಾಯಿಯಿಂದ ಹೊರತೆಗೆಯುತ್ತಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದ್ದರೂ ಅವರು ಈ ರೀತಿ ಮಾಡುತ್ತಿರುವುದು ಇದು ಮೊದಲೇನಲ್ಲ.

ಶಿಷ್ಟಾಚಾರ ಪಾಲಿಸಲೇ ಇಲ್ಲ!
ರಾಜಪಥಕ್ಕೆ ಶಿಷ್ಟಾಚಾರದಂತೆ ಒಬಾಮ ಅವರು ರಾಷ್ಟ್ರಪತಿ ಕಾರಿನಲ್ಲೇ ಆಗಮಿಸುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಆಗಮಿಸಿದ್ದು ಪ್ರತ್ಯೇಕವಾಗಿ. ಸಾಮಾನ್ಯವಾಗಿ
ಅತಿಥಿಗಳು ರಾಷ್ಟ್ರಪತಿಭವನದ ಮೂಲಕ ರಾಷ್ಟ್ರಪತಿಗಳ ಕಾರಿನಲ್ಲೇ ರಾಜಪಥಕ್ಕೆ ಆಗಮಿಸುವುದು ಸಂಪ್ರದಾಯ. ಆದರೆ, ಭದ್ರತಾ ಕಾರಣಗಳಿಂದಾಗಿ ತಮ್ಮ `ಬೀಸ್ಟ್' ಕಾರಿನಲ್ಲೇ ರಾಜಪಥಕ್ಕೆ ಆಗಮಿಸಿದರು ಒಬಾಮ. ಬಳಿಕ ತಮ್ಮ ಕಾರಿನಲ್ಲೇ ಪ್ರಣಬ್ ಆಗಮಿಸಿದರು.

ವಿಶೇಷ ಗಾಜಿನ ಭದ್ರತೆ
ಈ ಬಾರಿಯ ಗಣರಾಜ್ಯೋತ್ಸವವನ್ನು ಒಬಾಮ, ಪತ್ನಿ ಮಿಶೆಲ್, ರಾಷ್ಟ್ರಪತಿ ಮುಖರ್ಜಿ ಹಾಗೂ ಪ್ರಧಾನಿ ಮೋದಿ ಅವರು ವೀಕ್ಷಿಸಿದ್ದು ಗುಂಡುನಿರೋಧಕ ಗಾಜಿನ ಪರದೆಯ
ರಕ್ಷಣೆಯಲ್ಲಿ. ಭದ್ರತಾ ಕಾರಣಗಳಿಂದಾಗಿ ವಿವಿಐಪಿ ಗ್ಯಾಲರಿಗೆ ಈ ವ್ಯವಸ್ಥೆ. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಅವರ ಪತ್ನಿ, ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಮತ್ತು ರಕ್ಷಣಾ ಖಾತೆ ರಾಜ್ಯ ಸಚಿವ ಇಂದ್ರಜಿತ್ ಸಿಂಗ್ ಸಹ ವಿವಿಐಪಿ ಗ್ಯಾಲರಿಯಲ್ಲಿದ್ದರು.


ನಾರಿ ಶಕ್ತಿ ಪ್ರದರ್ಶನ

ಈ ಬಾರಿಯ ಗಣರಾಜ್ಯೋತ್ಸವ ಉದ್ಘೋಷ ನಾರಿ ಶಕ್ತಿ. ಹಾಗಾಗಿ ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‍ನಲ್ಲಿ ನೌಕೆ, ವಾಯು ಮತ್ತು
ಭೂಸೇನೆಯ ಮಹಿಳಾ ಪಡೆಗಳು ಪಾಲ್ಗೊಂಡಿದ್ದವು. ಮೊದಲ ಪರೇಡ್‍ನ ನೇತೃತ್ವ ವಹಿಸಿದ್ದು ಕ್ಯಾ. ದಿವ್ಯಾ. ಮಹಿಳಾ ಸಚಿವರಾದ ಸ್ಮೃತಿ ಇರಾನಿ, ಉಮಾಭಾರತಿ,
ನಿರ್ಮಲಾ ಸೀತಾರಾಮನ್ ಸೇರಿ, ಎಲ್ಲರೂ ಎದ್ದು ನಿಂತು ಗೌರವ ಸೂಚಿಸಿದ್ದು ವಿಶೇಷ.

ರಾಜಪಥಕ್ಕೆ ಸರ್ಪಗಾವಲು

ಉಗ್ರರ ದಾಳಿ ಭೀತಿ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಸರ್ಪಗಾವಲು. ರಾಜಧಾನಿಯ ಪ್ರತಿ ರಸ್ತೆ, ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸರು, ಯೋಧರನ್ನು ನಿಯೋಜಿಸಲಾಗಿತ್ತು. ರಾಜಪಥದ ಅಕ್ಕಪಕ್ಕದ ಕಟ್ಟಡಗಳನ್ನಂತು ಮೊದಲೇ ಬಂದ್ ಮಾಡಲಾಗಿತ್ತು. ಬಹುಮಹಡಿ ಕಟ್ಟಡಗಳನ್ನು ಸಂಪೂರ್ಣ ಭದ್ರತಾ ಸಿಬ್ಬಂದಿಂಯೇ ವಶಕ್ಕೆ ತೆಗೆದುಕೊಂಡಿದ್ದರು. ಒಟ್ಟಾರೆ ಒಬಾಮಗಾಗಿ ಏಳು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.

ಸಂಭ್ರಮಕ್ಕೆ ಎರಚಿದ ತಣ್ಣೀರು
ಮೊದಲೇ ಮೈಕೊರೆಯುವ ಚಳಿ. ಜತೆಗೆ ತುಂತುರು ಮಳೆಯ ಸಿಂಚನ. ಆದರೆ ಜನರ ಮೇರೆ ಮೀರಿದ ಉತ್ಸಾಹವನ್ನು ಸಂಪೂರ್ಣ ಕಟ್ಟಿಹಾಕಲು ಸಾಧ್ಯವಾಗಲಿಲ್ಲ.
ಹಿರಿ ಯರು, ಕಿರಿಯರೆನ್ನದೆ ಎಲ್ಲರೂ ಚಳಿ, ಮಳೆ ಲೆಕ್ಕಿಸದೆ ಎರಡು ಗಂಟೆಗಳಷ್ಟು ಸುದೀರ್ಘ ನಡೆದ ಈ ಪಥಸಂಚಲನದ ಸಂಭ್ರಮ ಕಣ್ತುಂಬಿಕೊಂಡರು. ದಟ್ಟಮಂಜಿನಿಂದಾಗಿ
ವೈಮಾನಿಕ ಕಸರತ್ತನ್ನು ಕಡಿತಗೊಳಿಸಿದ್ದು ಸಾಹಸ ನೋಡಲು ಆಗಮಿಸಿದ್ದವರಿಗೆ ನಿರಾಸೆಯಾಗಿದ್ದು ನಿಜ.

ವಿಶೇಷ ಅನುಭವ
ಅಮೆರಿಕ ಅಧ್ಯಕ್ಷರಾಗಿ ಒಬಾಮ ಅನೇಕ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಆದರೆ, ಗಣರಾಜ್ಯೋತ್ಸವದಂಥ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ಇದೇ ಮೊದಲು. ಗಣರಾಜ್ಯೋತ್ಸವ ಅವರ ಪಾಲಿಗೆ ವಿಶೇಷ ಅನುಭವ. ಸಾರ್ವಜನಿಕವಾಗಿ ಎರಡು ಗಂಟೆ ಕೂತು ಅವರು ಕಾರ್ಯಕ್ರಮ ವೀಕ್ಷಿಸಿದ್ದೆ ವಿಶೇಷ. ಭದ್ರತಾ ದೃಷ್ಟಿಯಿಂದ ಅಮೆರಿಕದಿಂದ ಹೊರಗೆ ಒಬಾಮ ಅವರು ಸಾರ್ವಜನಿಕವಾಗಿ ಹೆಚ್ಚಿನ ಸಮಯ ಕಳೆಯುವುದಿಲ್ಲ

ತೆಲಂಗಾಣಕ್ಕೆ ಮೊದಲ ಪರೇಡ್!
ಹೊಸದಾಗಿ ಉದಯಿಸಿರುವ ತೆಲಂಗಾಣ ರಾಜ್ಯಕ್ಕೆ ಇದು ಮೊದಲ ಗಣರಾಜ್ಯೋತ್ಸವ ಪರೇಡ್! ಮೊದಲ ಪರೇಡ್ನಲ್ಲಿ ತೆಲಂಗಾಣವು ಬೊನಾಲು ಹಬ್ಬದ ಸಂಭ್ರಮವನ್ನು
ತನ್ನ ಸ್ತಬ್ಧಚಿತ್ರದ ಮೂಲಕ ಪ್ರತಿಬಿಂಬಿಸಿತು.

ಈ ಬಾರಿಯ ಗಣರಾಜ್ಯೋತ್ಸವ ಒಬಾಮ ಅವರಿಂದ ಬಣ್ಣಕಟ್ಟಿತ್ತು. ಅಮೆರಿಕ, ವಿಶ್ವದ ದೊಡ್ಡಣ್ಣ ಎಂಬ ಖ್ಯಾತಿಗೂ ಪಾತ್ರ. ಹೀಗಾಗಿ ನಮ್ಮ ಶೀರ್ಷಿಕೆಗೆ ಒಬಣ್ಣ ಎಂಬ ಪದ ಬಳಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com