
ನವದೆಹಲಿ: ಫೆಬ್ರವರಿ 7ರಂದು ನಡೆಯುವ ದೆಹಲಿ ವಿಧಾನಸಭೆ ಚುನಾವಣೆಗೆ 70 ಪಕ್ಷಗಳ 673 ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಪೈಕಿ 114 ಮಂದಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎಂದು ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್(ಎಡಿಆರ್) ಹೇಳಿದೆ.
ಚುನಾವಣೆ ಕಣಕ್ಕಿಳಿದಿರುವ 673 ಅಭ್ಯರ್ಥಿಗಳ ಪ್ರಮಾಣ ಪತ್ರಗಳ ವಿಶ್ಲೇಷಣೆ ನಡೆಸಿದ ಎಡಿಆರ್, ಬಿಜೆಪಿ ಕಣಕ್ಕಿಳಿಸಿರುವವರಲ್ಲಿ ಅತಿ ಹೆಚ್ಚು ಅಂದರೆ 27 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ. ನಂತರದ ಸ್ಥಾನದಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 21, ಕಾಂಗ್ರೆಸ್ ನ 12 ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ ಎಂದು ವಿವರಿಸಿದೆ.
ಪ್ರಮುಖವಾಗಿ ತುಘಲಕಾಬಾದ್ ಕ್ಷೇತ್ರದ ಐದು ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ ಎಂದು ಎಡಿಆರ್ ಹೇಳಿದೆ.
ದೆಹಲಿ ವಿಧಾನಸಭೆ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳ ಪೈಕಿ 114 ಅಭ್ಯರ್ಥಿಗಳು ಶೇ 17ರಷ್ಟು ಮಂದಿ ಅಪರಾಧ ಹಿನ್ನೆಲೆಯುಳ್ಳವರಿದ್ದಾರೆ. 2013ರಲ್ಲಿ ನಡೆದ ಚುನಾವಣೆಯಲ್ಲಿ ಶೇ 16ರಷ್ಟು, 2008ರಲ್ಲಿ ನಡೆದ ಚುನಾವಣೆಯಲ್ಲಿ ಶೇ 14ರಷ್ಟು ಅಭ್ಯರ್ಥಿಗಳು ಅಪರಾಧ ಹಿನ್ನೆಲೆಯುಳ್ಳವರು ಸ್ಪರ್ಧಿಸಿದ್ದರು ಎಂದು ಎಡಿಆರ್ ಸಂಸ್ಥೆಯ ಸಂಸ್ಥಾಪಕ ಜಗದೀಪ್ ಚೋಕ್ರಾ ಹೇಳಿದ್ದಾರೆ.
ಅಪರಾಧ ಹಿನ್ನೆಲೆಯುಳ್ಳ 114 ಅಭ್ಯರ್ಥಿಗಳಲ್ಲಿ 74 ಮಂದಿ ಗಂಭೀರ ಅಪರಾಧಗಳಾದ ಕೊಲೆ, ಕೊಲೆಗೆ ಯತ್ನ, ಹಲ್ಲೆ, ‘ಚೆಕ್ ಬೌನ್ಸ್’ ಹಾಗೂ ಮಹಿಳೆಯವ ವಿರುದ್ಧದ ಪ್ರಕರಣಗಳಲ್ಲಿ ಭಾಗಿಯಾಗಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.
Advertisement