
ಇಂದೋರ್: ಹೆಚ್1ಎನ್1 ಮಾರಕ ರೋಗದ ಸೋಂಕು ತಗುಲಿ 1 ವರ್ಷದ ಹೆಣ್ಣುಮಗು ಬಲಿಯಾಗಿರುವುದಾಗಿ ಶುಕ್ರವಾರ ವರದಿಯಾಗಿದೆ.
ಹಂದಿ ಜ್ವರದ ಸೋಂಕು ತಗುಲಿ ಹಲವು ದಿನಗಳಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿದ್ದ 1 ವರ್ಷದ ಹೆಣ್ಣು ಮಗು, ಮೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಮಗುವಿನ ಸ್ಥಿತಿ ತೀರಾ ಗಂಭೀರವಾದಾಗ ಇಂಡೆಕ್ಸ್ ವೈದ್ಯಕೀಯ ಆಸ್ಪತ್ರೆಗೆ ತೆರಳುವಂತೆ ಅಲ್ಲಿನ ವೈದ್ಯರು ಸಲಹೆ ನೀಡಿದ್ದರು. ವೈದ್ಯರ ಸಲಹೆಯಂತೆ ಮಗುವಿನ ಪೋಷಕರು ಇಂಡೆಕ್ಸ್ ವೈದ್ಯಾಕೀಯ ಆಸ್ಪತ್ರೆಗೆ ದಾಖಲು ಮಾಡಲು ಹೋಗುವಷ್ಟರಲ್ಲಿ ತೀವ್ರ ಬಳಲಿಕೆಯಿಂದ ಸಾವನಪ್ಪಿದೆ ಎಂದು ಹೇಳಲಾಗುತ್ತಿದೆ.
ಮಗು ಸಾವನಪ್ಪಿರುವುದು ಹಂದಿಜ್ವರದಿಂದಲೇ ಎಂದು ಆಸ್ಪತ್ರೆಯ ವೈದ್ಯರು ಈ ವರೆಗೂ ಧೃಢೀಕರಿಸಿಲ್ಲ. ಆದರೆ ಪೋಷಕರು ಮಗು ಸಾವನಪ್ಪಿರುವುದು ಹಂದಿ ಜ್ವರದಿಂದಲೇ ಎಂದು ಹೇಳಿದ್ದಾರೆ.
ಈ ಕುರಿತಂತೆ ಹೇಳಿಕೆ ನೀಡಿರುವ ಎಂಜಿಎಂ ಕಾಲೇಜಿನ ಮುಖ್ಯಾಧಿಕಾರಿ ಡಾ.ಸಂಜಯ್ ದೀಕ್ಷಿತ್, ದಾಖಲಾತಿಗಾಗಿ ಆಸ್ಪತ್ರೆಗೆ ಬಂದಾಗಲೇ ಮಗು ಸಾವನಪ್ಪಿತ್ತು. ಆದ ಕಾರಣ ಸ್ಯಾಂಪಲ್‌ಗಾಗಿ ಮಗುವಿನ ರಕ್ತ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ವೈದ್ಯಕೀಯ ತಪಾಸಣೆ ವೇಳೆ ಮಗು ಸಾವನಪ್ಪಿರುವುದು ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
Advertisement