
ಬೆಂಗಳೂರು: ಕಾಲೇಜು ಶಿಕ್ಷಣ ಶುಲ್ಕ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಭಾರತೀಯ ವಿದ್ಯಾರ್ಥಿ ಫೆಡರೇಷನ್ (ಎಸ್‍ಎಫ್ಐ) ಕಾರ್ಯಕರ್ತರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ಸಂಚಾರ ದಟ್ಟಣೆ ಉಂಟುಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬುಧವಾರ ಹಾಗೂ ಗುರುವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದ್ದೆವು. ಸರ್ಕಾರದ ಯಾರೊಬ್ಬರೂ ಸ್ಪಂದಿಸಲಿಲ್ಲ. ಹೀಗಾಗಿ ಶುಕ್ರವಾರ ಬೆಳಗ್ಗೆ ರೈಲು ನಿಲ್ದಾಣದಿಂದ ಮೆರವಣಿಗೆ ಹೊರಟು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯೋಜಿಸಿದ್ದೆವು. ಮೆರವಣಿಗೆ ಮಹಾರಾಣಿ ಕಾಲೇಜು ಜಂಕ್ಷನ್‍ನಿಂದ ಮುಂದಕ್ಕೆ ತೆರಳದಂತೆ ಪೊಲೀಸರು ತಡೆದರು. ಆದರೆ, ನಾವು ಹೋಗ ಲೇಬೇಕು ಎಂದಾಗ ಸಚಿವರೊಬ್ಬರು ಬರುವುದಾಗಿ ಪೊಲೀಸರು ಹೇಳಿದರು. ಹೀಗಾಗಿ, ನಾವು ರಸ್ತೆಯಲ್ಲಿ ಕುಳಿತೆವು.ಎಷ್ಟೊತ್ತಾದರೂ ಸಚಿವರು ಬರಲಿಲ್ಲ, ಆದರೆ ಪೊಲೀಸರು ನಮ್ಮನ್ನು ತೆರವುಗೊಳಿಸಲು ಯತ್ನಿಸಿ ಲಾಠಿಪ್ರಹಾರ ನಡೆಸಿದರು.
ಅಲ್ಲದೇ 80ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಲಾಠಿಪ್ರಹಾರದಿಂದ ಹಾಸನದ ವಿದ್ಯಾರ್ಥಿನಿಯರಾದ ಪೂಜಾ, ಗೌತು ಹಾಗೂ ಕೋಲಾರದ ಶಂಕರ ಎಂಬುವರು ಗಾಯ ಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ಎಸ್‍ಎಫ್ಐ ಕಾರ್ಯಕರ್ತರು ಹೇಳಿದರು.
ಪ್ರತಿಭಟನೆ ಹಿನ್ನೆಲೆಯಲ್ಲಿ ಸಂಜೆ ತಮ್ಮನ್ನು ಭೇಟಿ ಮಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಅವರು ಫೆ..6ರಂದು ಬೇಡಿಕೆಗಳ ಬಗ್ಗೆ ಸಭೆ ನಡೆಸುವುದಾಗಿ ತಿಳಿಸಿದ್ದಾರೆಂದು ಕಾರ್ಯಕರ್ತರು ಮಾಹಿತಿ ನೀಡಿದರು.
ಟ್ರಾಫಿಕ್ ಜಾಮ್
ಪ್ರತಿಭಟನಾ ವೇಳೆ ಮೆರವಣಿಗೆ ಹಿನ್ನೆಲೆಯಲ್ಲಿ ಶೇಷಾದ್ರಿ ರಸ್ತೆ, ರೈಲು ನಿಲ್ದಾಣ, ಓಕಳಿಪುರ, ಮೆಜೆಸ್ಟಿಕ್ ಸುತ್ತ ಸುಮಾರು 1 ತಾಸಿಗೂ ಹೆಚ್ಚು ಕಾಲ ಸಂಚಾರ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡುವಂತಾಯಿತು.
Advertisement