ಬಜೆಟಲ್ಲಿ ರಾಜ್ಯಗಳಿಗೆ ಗಿಫ್ಟ್?

ಈ ಬಾರಿಯ ಬಜೆಟ್‍ನಲ್ಲಿ ರಾಜ್ಯಗಳಿಗೆ ಸಿಹಿಸುದ್ದಿ ಇರುವ ಸಾಧ್ಯತೆಯೇ ಹೆಚ್ಚು. ಗುಜರಾತ್ ಮುಖ್ಯಮಂತ್ರಿ...
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ
ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ

ನವದೆಹಲಿ: ಈ ಬಾರಿಯ ಬಜೆಟ್‍ನಲ್ಲಿ ರಾಜ್ಯಗಳಿಗೆ ಸಿಹಿಸುದ್ದಿ ಇರುವ ಸಾಧ್ಯತೆಯೇ ಹೆಚ್ಚು. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಕಂಡಿದ್ದ ಕನಸನ್ನು ನನಸು ಮಾಡಲು ಹೊರಟಿದ್ದಾರೆ ಪ್ರಧಾನಿ ನರೇಂದ್ರ ಮೋದಿ.

ರಾಜ್ಯಗಳಿಗೆ ಹೆಚ್ಚು ಹಣಕಾಸು ನೆರವು ನೀಡುವ ಮೂಲಕ ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗುವಂತೆ ಮಾಡುವುದು ಅವರ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ಮೋದಿ ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ ರಾಜ್ಯಗಳಿಗೆ ಹೆಚ್ಚಿನ ನೆರವು ಒದಗಿಸುವ ಸಾಧ್ಯತೆಯಿದೆ. ಸುಮಾರು ರು3 ಲಕ್ಷ ಕೋಟಿಯಷ್ಟು ಹಣವನ್ನು ರಾಜ್ಯಗಳಿಗೆ ನೀಡಲು ಕೇಂದ್ರ ಚಿಂತನೆ ನಡೆಸಿದೆ. ಈ ಮೂಲಕ ತಮ್ಮ ಆದ್ಯತೆಯ ಮೇರೆಗೆ ಹಾಗೂ ಅನುಕೂಲಕ್ಕೆ ತಕ್ಕಂತೆ ಹಣವನ್ನು ವ್ಯಯಿಸುವ ಅವಕಾಶವನ್ನು ರಾಜ್ಯಗಳಿಗೆ ಒದಗಿಸುವುದು ಕೇಂದ್ರದ ಉದ್ದೇಶವಾಗಿದೆ.

ಸಿಎಂಗಳ ಜತೆ ಸಭೆ: ಫೆ.6ರಂದು ನೀತಿ ಆಯೋಗದ ಮೊದಲ ಸಭೆ ನಡೆಯಲಿದ್ದು, ಇದಾದ ಬಳಿಕ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದ್ದಾರೆ. ಅದರಲ್ಲಿ ಸಿಎಂಗಳು ಬಜೆಟ್‍ಗೆ ತಮ್ಮ ಸಲಹೆಗಳನ್ನು ನೀಡುವುದರ ಜತೆಗೆ ಹಣ ವ್ಯಯಿಸುವಿಕೆಯಲ್ಲಿ ನಮ್ಯತೆ ತರುವಂತೆ ಕೋರುವ ಸಾಧ್ಯತೆಯಿದೆ.

ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೇ ಪ್ರಧಾನಿ ಮೋದಿ ಅವರು ರಾಜ್ಯಗಳಿಗೆ ಹಣಕಾಸು ವೆಚ್ಚ ಮಾಡುವ ವಿಚಾರದಲ್ಲಿ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾಯಿಸಿದ್ದರು. ಈಗ ಅವರ ಆಕಾಂಕ್ಷೆಯನ್ನು ಅವರೇ ಜಾರಿಗೆ ತರಲು ಆಯೋಜಿಸಿದ್ದಾರೆ. ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹಲವು ವರ್ಷಗಳಿಂದಲೇ ಇಂತಹುದೊಂದು ಪ್ರಸ್ತಾಪವನ್ನು ಮುಂದಿಟ್ಟಿದ್ದವು.

ಸಿಎಸ್‍ಎಸ್‍ಗೆ ಕತ್ತರಿ
ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆ(ಸಿಎಸ್‍ಎಸ್)ಗಳಿಗೆ ಕತ್ತರಿ ಹಾಕುವ ಮೂಲಕ ರಾಜ್ಯಗಳಿಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು ಸರ್ಕಾರದ ಉದ್ದೇಶವಾಗಿದೆ. ಸಿಎಸ್‍ಎಸ್ ಸಂಖ್ಯೆಯನ್ನು ಕಡಿಮೆಗೊಳಿಸುವ ಪ್ರಕ್ರಿಯೆಯನ್ನು ಹಿಂದಿನ ಯುಪಿಎ ಸರ್ಕಾರವೇ ಆರಂಭಿಸಿತ್ತು. ಈಗ ಪ್ರಧಾನಿ ಮೋದಿ ಅವರು ಅದಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸದ್ಯ ರು 2.52 ಲಕ್ಷ ಕೋಟಿ ಅನುದಾನ ಹೊಂದಿರುವ 66 ಕೇಂದ್ರ ಸರ್ಕಾರಿ ಪ್ರಾಯೋಜಿತ ಯೋಜನೆಗಳಿವೆ.

2015-16ನೇ ಸಾಲಿನ ಬಜೆಟ್‍ನಲ್ಲಿ ಸಿಎಸ್‍ಎಸ್‍ಗಳ ಸಂಖ್ಯೆ ಒಂದಂಕಿಗೆ ಇಳಿಯುವ ಎಲ್ಲ ಸಾಧ್ಯತೆಗಳೂ ಇವೆ. ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಸರ್ವ ಶಿಕ್ಷಾ ಅಭಿಯಾನ, ಜವಾಹರ್‍ಲಾಲ್ ನೆಹರೂ ರಾಷ್ಟ್ರೀಯ ನಗರ ಪುನಶ್ಚೇತನ ಯೋಜನೆಗಳು ಕೇಂದ್ರ ಸರ್ಕಾರಿ ಪ್ರಾಯೋಜಿತವಾಗಿದ್ದು, ಇದಕ್ಕೆ ಪೂರ್ಣ ಅಥವಾ ಭಾಗಶಃ ಹಣವನ್ನು ಕೇಂದ್ರ ಸರ್ಕಾರವೇ ನೀಡುತ್ತಿತ್ತು. ಆದರೆ ಯೋಜನೆಗಳನ್ನು ಅನುಷ್ಠಾನಗೊಳಿಸುವ ಕೆಲಸವನ್ನು ರಾಜ್ಯಗಳು ಮಾಡಬೇಕಿತ್ತು. ಆದರೆ ಇನ್ನು ಮುಂದೆ ರಾಜ್ಯ ಸರ್ಕಾರಗಳಿಗೇ ಹೆಚ್ಚಿನ ಹಣ ಹರಿದುಬರುವ ಕಾರಣ ತಮ್ಮ ಅನುಕೂಲಕ್ಕೆ ತಕ್ಕಂತೆ ಯೋಜನೆಗಳ ಅನುಷ್ಠಾನ ಕಾರ್ಯ ನಡೆಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com