
ಪಾಟ್ನಾ: ನಕಲಿ ಶಿಕ್ಷಣ ಪದವಿ ಪ್ರಮಾಣ ಪತ್ರ ನೀಡಿರುವವರ ವಿರುದ್ಧ ಬಿಹಾರ ಸರ್ಕಾರದ ಕಾನೂನು ಕ್ರಮಕ್ಕೆ ಹೆದರಿ 1.400 ಪ್ರಾಥಮಿಕ ಶಾಲಾ ಶಿಕ್ಷಕರು ರಾಜೀನಾಮೆ ನೀಡಿದ್ದಾರೆ.
ನಕಲಿ ಪ್ರಮಾಣ ಪತ್ರ ನೀಡಿ ನೌಕರಿಗೆ ಸೇರಿದವರ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ಪಾಟ್ನಾ ಹೈಕೋರ್ಟ್ ಸೂಚನೆ ನೀಡಿತ್ತು. ಕಾನೂನು ಕ್ರಮ ಎದುರಿಸಬೇಕಾದ ಹಿನ್ನೆಲೆಯಲ್ಲಿ 1.400 ಶಿಕ್ಷಕರು ತಮ್ಮ ಸೇವೆಗೆ ರಾಜೀನಾಮೆ ನೀಡಿದ್ದಾರೆ.
ನಕಲಿ ಪದವಿ ಪ್ರಮಾಣ ಪತ್ರ ನೀಡಿದ್ದ ಶಿಕ್ಷಕರಿಗೆ ರಾಜೀನಾಮೆ ನೀಡಲು ಜುಲೈ 8ರ ವರೆಗೆ ಗಡುವು ನೀಡಲಾಗಿತ್ತು. ಸದ್ಯಕ್ಕೆ 1.400 ಮಂದಿ ರಾಜೀನಾಮೆ ನೀಡಿದ್ದಾರೆ. ಜುಲೈ 8 ರ ನಂತರ ಒಟ್ಟಾರೆ ಚಿತ್ರಣ ದೊರೆಯುತ್ತದೆ ಎಂದು ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಆರ್.ಕೆ ಮಹಾಜನ್ ಹೇಳಿದ್ದಾರೆ, ಇನ್ನು ಇಲಾಖೆ ನೀಡಿದ್ದ ನಿಗದಿತ ಅವಧಿಯಲ್ಲಿ ರಾಜೀನಾಮೆ ನೀಡದವರ ವಿರುದ್ಧ ಎಫ್ ಐ ಆರ್ ದಾಖಲಿಸಿ, ನೌಕರಿಯಿಂದ ವಜಾಗೊಳಿಸುವುದಾಗಿ ಅವರು ತಿಳಿಸಿದ್ದಾರೆ.
ಬಿಹಾರದಲ್ಲಿ ಒಟ್ಟು 3.5 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರಿದ್ದು, ಅದರಲ್ಲಿ ಹೆಚ್ಚಿನ ಸಂಖ್ಯೆಯ ಶಿಕ್ಷಕರು ನೌಕರಿಗೆ ಸೇರಲು ನಕಲಿ ಪ್ರಮಾಣ ಪತ್ರಗಳನ್ನು ನೀಡಿದ್ದಾರೆ ಎಂದು ಪಾಟ್ನಾ ಹೈ ಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಬಿಹಾರ ಸರ್ಕಾರ ಪ್ರಕರಣದ ತನಿಖೆ ನಡೆಸಲು ಜಾಗೃತ ದಳ ಅಧಿಕಾರಿಗಳಿಗೆ ಆದೇಶಿಸಿದೆ.
Advertisement