ಛೋಟಾ ರಾಜನ್ ಹತ್ಯೆಗೆ ದಾವೂದ್ ಗ್ಯಾಂಗ್ ಮಾಡಿದ್ದ ಸಂಚು ವಿಫಲ

ಭೂಗತ ಪಾತಕಿ ಛೋಟಾ ರಾಜನ್ ನನ್ನು ಹತ್ಯೆಗೈಯ್ಯುವ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಸಂಚು ವಿಫಲವಾಗಿದೆ ಎಂದು ತಿಳಿದುಬಂದಿದೆ.
ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್
ದಾವೂದ್ ಇಬ್ರಾಹಿಂ ಮತ್ತು ಛೋಟಾ ರಾಜನ್

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ನನ್ನು ಹತ್ಯೆಗೈಯ್ಯುವ ದಾವೂದ್ ಇಬ್ರಾಹಿಂ ಗ್ಯಾಂಗ್ ನ ಸಂಚು ವಿಫಲವಾಗಿದೆ ಎಂದು ತಿಳಿದುಬಂದಿದೆ.

ಒಂದು ಕಾಲ ತನ್ನ ಆತ್ಮೀಯ ಗೆಳೆಯ ಮತ್ತು ಬಲಗೈ ಬಂಟನಾಗಿದ್ದ ಮತ್ತು ಕಳೆದ ಕೆಲವು ವರ್ಷಗಳಿಂದ ಪರಮ ಶತ್ರುವಾಗಿರುವ ಭೂಗತ ಪಾತಕಿ ಛೋಟಾ ರಾಜನ್ ನನ್ನು ಹತ್ಯೆಗೈಯುವ ಪಾತಕಿ ದಾವೂದ್ ಇಬ್ರಾಹಿಂನ ಕೊನೆಯ ಸಂಚು ವಿಫಲವಾಗಿರುವ ಅಂಶ ಬೆಳಕಿಗೆ ಬಂದಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.

ಛೋಟಾ ರಾಜನ್ ನನ್ನು ಹತ್ಯೆಗೈಯ್ಯಲು ದಾವೂದ್ ಇಬ್ರಾಹಿಂ ತನ್ನ ಬಲಗೈ ಬಂಟ ಚೋಟಾ ಶಕೀಲ್ ಗೆ ಸುಪಾರಿ ನೀಡಿದ್ದ. ಈ ವರ್ಷದ ಆರಂಭದಲ್ಲಿ ಛೋಟಾ ರಾಜನ್ ನನ್ನು ಹತ್ಯೆಗೈಯ್ಯಲು ಯೋಜನೆ ರೂಪಿಸಲಾಗಿತ್ತು. ಅಲ್ಲದೆ ಸದ್ಯ ಹಿಂದು ಡಾನ್‌ ಎಂದು ಹೇಳಿಕೊಂಡು ಓಡಾಡುತ್ತಿರುವ ಚೋಟಾ ರಾಜನ್‌ ಹತ್ಯೆಗೆ ನಿಖರವಾದ ಸ್ಥಳವನ್ನೂ ಗುರುತಿಸಲಾಗಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಛೋಟಾ ರಾಜನ್ ನನ್ನು ಕೊಂದು ತನ್ನ ಬಾಸ್ ದಾವೂದ್ ನ ಆಸೆಯನ್ನು ಈಡೇರಿಸಬೇಕೆಂಬ ಶಕೀಲ್ ನ ಪ್ರಯತ್ನ ವಿಫಲವಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.

ಮೂಲಗಳ ಪ್ರಕಾರ ಪ್ರಸ್ತುತ ಬ್ಯಾಂಕಾಕ್ ನಲ್ಲಿ ತಲೆಮರೆಸಿಕೊಂಡಿರುವ ಛೋಟಾ ರಾಜನ್ ನನ್ನು ಹತ್ಯೆ ಮಾಡಲು ಡಿ ಕಂಪೆನಿ ನಡೆಸಿದ್ದ ಸಂಚಿನಿಂದ ರಾಜನ್ ಪಾರಾಗಿದ್ದ. ಛೋಟಾ ರಾಜನ್ ಗುಂಪಿನ ಅತ್ಯಂತ ನಂಬಿಕೆಯ ವ್ಯಕ್ತಿಯೊಬ್ಬನನ್ನು ಡಿ ಕಂಪನಿ ತನ್ನತ್ತ ಸೆಳೆದುಕೊಂಡು, ಛೋಟಾ ರಾಜನ್ ಮುಗಿಸಲು ಸಂಚು ರೂಪಿಸಿತ್ತು. ಆದರೆ ತನ್ನ ಹತ್ಯೆಯ ಸಂಚಿನ ಸುಳಿವು ಪಡೆದ ಛೋಟಾ ರಾಜನ್ ತನ್ನ ಸುರಕ್ಷಿತ ಅಡ್ಡಾದಲ್ಲಿ ಅಡಗಿಕೊಳ್ಳುವ ಮೂಲಕ ದಾವೂದ್ ಗ್ಯಾಂಗ್ ನ ಸಂಚು ವಿಫಲವಾಗಿದೆ. ಅಲ್ಲದೇ ದಾವೂದ್ ಬಲಗೈ ಬಂಟ ಛೋಟಾ ಶಕೀಲ್ ನಡೆಸಿದ ಸಂಭಾಷಣೆಯ ವಿವರ ಲಭ್ಯವಾಗಿರುವುದಾಗಿ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಕಳೆದ ಏಪ್ರಿಲ್ ನಲ್ಲಿ ಕರಾಚಿಯಿಂದ ಭಾರತದಲ್ಲಿರುವ ಓರ್ವ ವ್ಯಕ್ತಿಗೆ ಕರೆ ಬಂದಿದ್ದು, ಛೋಟಾ ರಾಜನ್ ಕುರಿತ ಮಾತುಕತೆ ನಡೆದಿವೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ ಈ ವ್ಯಕ್ತಿ ಛೋಟಾ ರಾಜನ್ ಬಂಟನಾಗಿದ್ದು, ಈತನ ಮೂಲಕವೇ ರಾಜನ್ ನನ್ನು ಹತ್ಯೆ ಮಾಡಲು ಶಕೀಲ್ ಪ್ರಯತ್ನಿಸಿದ್ದ. ದೂರವಾಣಿ ಸಂಭಾಷಣೆಯಲ್ಲಿರುವಂತೆ, ಕೊನೆಯ ಬಾರಿ ರಾಜನ್ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದ. ಈ ಬಾರಿ ಆತ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲಾರ ಎಂದು ಶಕೀಲ್ ಮಾತನಾಡಿರುವ ಕುರಿತು ಪತ್ರಿಕೆ ವರದಿ ಮಾಡಿದೆ.

ಇದೇ ಸಂಭಾಷಣೆ ವೇಳೆ ಶಕೀಲ್ ರಾಜನ್ ನನ್ನು ಆಸ್ಟ್ರೇಲಿಯಾದಲ್ಲಿಯೇ ಹತ್ಯೆ ಮಾಡಲು ಹೂಡಿದ್ದ ಸಂಚನ್ನು ಕೂಡ ಬಯಲು ಮಾಡಿದ್ದಾನೆ. ದಾವೂದ್ ಗ್ಯಾಂಗ್ ನ ಕೆಲ ನಂಬಿಕಸ್ಥ ಶಾರ್ಪ್ ಶೂಟರ್ ಗಳನ್ನು ಆಸ್ಟ್ರೇಲಿಯಾಗೆ ಕಳುಹಿಸಿಕೊಡಲಾಗತ್ತು ಎಂದು ಶಕೀಲ್ ಹೇಳಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com