ವರ್ಗಾವಣೆ ಆದೇಶ ಪಾಲಿಸದ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅಮಾನತು

ವರ್ಗಾವಣೆ ಆದೇಶವನ್ನು ಪಾಲಿಸದೇ ಇರುವುದಕ್ಕಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್(ಸಂಗ್ರಹ ಚಿತ್ರ)
ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್(ಸಂಗ್ರಹ ಚಿತ್ರ)

ಮುಂಬೈ: ವರ್ಗಾವಣೆ ಆದೇಶವನ್ನು ಪಾಲಿಸದೇ ಇರುವುದಕ್ಕಾಗಿ ಎನ್ ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ದಯಾನಾಯಕ್ ಅವರನ್ನು ಮಹಾರಾಷ್ಟ್ರದ ನಾಗ್ಪುರಕ್ಕೆ ವರ್ಗಾವಣೆ ಮಾಡಿ ಮಹಾರಾಷ್ಟ್ರ ಪೊಲೀಸ್ ಇಲಾಖೆ ಆದೇಶ ಹೊರಡಿಸಿತ್ತು. ಆದರೆ ಕುಟುಂಬ ಸುರಕ್ಷತೆಯ ಕಾರಣ ನೀಡಿ ದಯಾನಾಯಕ್ ನಾಗಪುರಕ್ಕೆ ತೆರಳಲು ನಿರಾಕರಿಸಿದ್ದರು. ಕಳೆದ ವರ್ಷವೇ ನಾಗ್ಪುರಕ್ಕೆ ದಯಾನಾಯಕ್ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ನಾಗಪುರದಲ್ಲಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರಿಗೆ ಜೀವ ಬೆದರಿಕೆ ಇದೆ ಎಂದು ಮಹಾರಾಷ್ಟ್ರ ಸರ್ಕಾರ ಹಾಗೂ ರಾಜ್ಯ ಡಿಜಿಪಿಗೆ ತಿಳಿಸಿದ್ದರು. ಅಲ್ಲದೇ ತಮ್ಮನ್ನು ಕೊಲೆ ಮಾಡುವ ಸಾಧ್ಯತೆ ಇದೆಯೆಂದೂ ದಯಾನಾಯಕ್ ಆತಂಕ ವ್ಯಕ್ತಪಡಿಸಿದ್ದರು.

ಸುಮಾರು 80 ಕ್ಕೂ ಹೆಚ್ಚು ಜನರನ್ನು ಎನ್ ಕೌಂಟರ್ ಮೂಲಕ ಹತ್ಯೆ ಮಾಡಿರುವ ದಯಾನಾಯಕ್ ಗೆ ನೀಡಲಾಗಿದ್ದ ಭದ್ರತೆಯನ್ನು ಮಹಾರಾಷ್ಟ್ರ ಸರ್ಕಾರ ವಾಪಸ್ ಪಡೆಡಿದೆ.  ಪೊಲೀಸ್ ಇಲಾಖೆಯಿಂದ ತಮ್ಮನ್ನು ಮೂಲೆಗುಂಪು ಮಾಡಿ ಹತ್ಯೆ ನಡೆಸುವ ಸಂಚು ರೂಪಿಸಲಾಗುತ್ತಿದೆ ಎಂದು ದಯಾನಾಯಕ್ ಹಲವು ವರ್ಷಗಳಿಂದ ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ತಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳಿದರೂ ಅದನ್ನು ಪರಿಗಣಿಸದೇ ಅಮಾನತುಗೊಳಿಸಲಾಗಿದ್ದು, ಈ ಪ್ರಕ್ರಿಯೆಯಲ್ಲಿ ಕಾರಣ ವಿಧಾನಗಳನ್ನು ಅನುಸರಿಸಿಲ್ಲ ಎಂದು ದಯಾನಾಯಕ್ ಆರೋಪಿಸಿದ್ದಾರೆ.  

ಕ್ರಿಮಿನಲ್ ಗಳನ್ನು ಎನ್ ಕೌಂಟರ್ ಮಾಡಿದ್ದ ಸಂದರ್ಭದಲ್ಲಿ ದಯಾನಾಯಕ್ 67  ಎಕೆ-47  ರೈಫಲ್ ಗಳನ್ನು ವಶಪಡಿಸಿಕೊಂಡಿದ್ದರು. ಜೀವ ಬೆದರಿಕೆ ಎದುರಿಸುತ್ತಿದ್ದರಿಂದ ಅವರಿಗೆ ಎಕೆ-47 ಹಾಗೂ ಭದ್ರತೆಯನ್ನು ಒದಗಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com