ಹೇಮಮಾಲಿನಿ ನಮ್ಮ ಮಗುವಿನ ಬಗ್ಗೆ ವಿಚಾರಿಸಲೇ ಇಲ್ಲ
ಜೈಪುರ್ : ಇಲ್ಲಿಗೆ ಸಮೀಪದ ದೌಸಾದಲ್ಲಿ ಗುರುವಾರ ರಾತ್ರಿ ಆಲ್ಟೋ ಕಾರಿಗೆ ತನ್ನ ಮರ್ಸಿಡಿಸ್ ಬೆಂಜ್ ಕಾರು ಮುಖಾಮುಖಿ ಡಿಕ್ಕಿಯಾಗಿ ಬಾಲಕಿಯ ಸಾವು ಸಂಭವಿಸಿದರೂ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಹೇಮಮಾಲಿನಿ ಆ ಬಗ್ಗೆ ಯಾರಲ್ಲೂ ಏನನ್ನೂ ವಿಚಾರಿಸಿಲ್ಲ. ಬಾಲಕಿಯ ಮರಣಕ್ಕೆ ದುಃಖ ಸಂತಾಪ ವ್ಯಕ್ತಪಡಿಸದೆ, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ದೊರಕಿಸುವ ಕಾಳಜಿಯನ್ನೂ ತೋರದೆ ಆಕೆ ನಿರ್ಗಮಿಸುವ ಮೂಲಕ ಮಾನವೀಯತೆಯನ್ನು ಮರೆತಿದ್ದಾರೆ ಎಂದು ಹೇಮಮಾಲಿನಿ ವಿರುದ್ಧ ಜನರು ಆರೋಪ ಮಾಡಿದ್ದಾರೆ.
ತನ್ನ ಎರಡು ವರ್ಷ ಪ್ರಾಯದ ಮುದ್ದು ಮಗು ಈ ಕಾರು ಅಪಘಾತದಲ್ಲಿ ಸಾವಿಗೀಡಾಗಿರುವ ದುಃಖವನ್ನು ತಾಳಿಕೊಳ್ಳಲು ಮಗುವಿನ ತಂದೆ ಹನುಮಾನ್ ಖಂಡೇಲ್‌ವಾಲ್‌ಗೆ ಇನ್ನೂ ಸಾಧ್ಯವಾಗಿಲ್ಲ. ಆತನನ್ನು ಮನೆಯವರು ಎಷ್ಟೇ ಸಮಾಧಾನ ಮಾಡಿದರೂ ಉಮ್ಮಳಿಸಿ ಬರುತ್ತಿರುವ ದುಃಖವನ್ನು ತಡೆದುಕೊಳ್ಳಲು ಆತನಿಗೆ ಸಾಧ್ಯವಾಗಿಲ್ಲ.
ಅದೇ ವೇಳೆ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿರುವ ಮಗುವಿನ ತಾಯಿ ಶಿಖಾಗೆ ಆಸ್ಪತ್ರೆ ಬೆಡ್‌ನಲ್ಲಿ ತನ್ನ ಮಗುವಿನದ್ದೇ ಚಿಂತೆ ಕಾಡುತ್ತಿದೆ. "ಚಿನ್ನೀ ಕಹಾಂ ಹೇ' ಎಂದು ಆಕೆ ಪದೇ ಪದೇ ಕೇಳುತ್ತಿದ್ದಾಳೆ ತನ್ನ ಮಗು ಚಿನ್ನಿ ಸತ್ತು ಹೋಗಿದ್ದಾಳೆ ಎಂಬ ವಿಷಯ ಆಕೆಗೆ ಇನ್ನೂ ಗೊತ್ತಿಲ್ಲ. ಗಂಭೀರ ಸ್ಥಿತಿಯಲ್ಲಿರುವ ಶಿಖಾಗೆ ಚಿನ್ನಿಯ ಸಾವಿನ ಸುದ್ದಿಯನ್ನು ತಿಳಿಸಲು ಯಾರೂ ಧೈರ್ಯ ಮಾಡುತ್ತಿಲ್ಲ.
"ನಾವು ಆಕೆಯ ಚಿನ್ನಿ ಚೆನ್ನಾಗಿದ್ದಾಳೆ; ನಮ್ಮೊಂದಿಗೆಯೇ ಇದ್ದಾಳೆ ಎಂದು ಸಮಾಧಾನ ಪಡಿಸಿದ್ದೇವೆ. ಒಂದೊಮ್ಮೆ ಮಗುವಿನ ಸಾವಿನ ವಿಷಯ ತಿಳಿಸಿದರೆ ಆಕೆಯ ಪರಿಸ್ಥಿತಿ ಇನ್ನಷ್ಟು ಚಿಂತಾಜನಕವಾದೀತೆಂಬ ಭಯ ನಮಗಿದೆ. ಚಿನ್ನಿ ತನ್ನ ತಾಯಿ - ತಂದೆಯ ಅತ್ಯಂತ ಮುದ್ದಿನ ಮಗಳು. ಆದುದರಿಂದಲೇ ನಾವು ಚಿನ್ನಿಯ ಸಾವಿನ ಸುದ್ದಿಯನ್ನು ಆಕೆಯ ತಾಯಿ ಶಿಖಾಗೆ ಈ ವರೆಗೂ ಹೇಳಿಲ್ಲ' ಎಂದು ಆಕೆಯ ಕುಟುಂಬದ ನಿಕಟವರ್ತಿಗಳೊಬ್ಬರು ಹೇಳಿದ್ದಾರೆ.
ಅಪಘಾತದಲ್ಲಿ ನಟಿ ಹೇಮಮಾಲಿನಿ ಕೂಡ ಗಾಯಗೊಂಡಿದ್ದಾರೆ. ಆದರೆ ತನಗಿಂತ ಹೆಚ್ಚು ಗಾಯಗೊಂಡಿರುವವರ ಸ್ಥಿತಿಹೇಗಿದೆ? ಅವರೆಲ್ಲ ಹೇಗಿದ್ದಾರೆ? ಎಂಬುದನ್ನು ತಿಳಿಯುವ ಯಾವುದೇ ಕಾಳಜಿಯನ್ನು ಹೇಮಾಮಾಲಿನಿಯಾಗಲೀ ಆಕೆಯ ನಿಕಟವರ್ತಿಗಳಾಗಲೀ ತೋರಿಲ್ಲ. ಇದು ಹನುಮಾನ್ ಖಂಡೇಲ್‌ವಾಲ್ ಅವರ ಕುಟುಂಬದವರಿಗೆ ತುಂಬಾ ನೋವುಂಟು ಮಾಡಿದೆ.
ತನ್ನ ಕಾರಿನ ಚಾಲಕನ ನಿರ್ಲಕ್ಷ್ಯದ ಚಾಲನೆಯ ಫಲವಾಗಿ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದದ್ದರಿಂದ ಈ ಅಪಘಾತ ಸಂಭವಿಸಿದೆ. ಆದುದರಿಂದ ಆ ಕಾರಿನಲ್ಲಿದ್ದವರಿಗೆ ಉತ್ತಮ ಚಿಕಿತ್ಸೆ ದೊರಕಿಸುವ, ಪರಿಹಾರ ನೀಡುವ, ಸಾಂತ್ವನ ಹೇಳುವ ಹೊಣೆಗಾರಿಕೆ ತನ್ನದೆಂಬ ಕಾಳಜಿಯನ್ನು ನಟಿ ಹೇಮ ಮಾಲಿನಿ ತೋರಬೇಕಾಗಿತ್ತು. ಆದರೆ ಆಕೆ ಅದನ್ನು ಈ ಹೊತ್ತಿನ ವರೆಗೂ ಮಾಡಿಲ್ಲ ಎಂದು ಹುನುಮಾನ್ ಖಂಡೇಲ್‌ವಾಲ್ ಕುಟುಂಬದವರು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ