
ನವದೆಹಲಿ: ವ್ಯಾಪಂ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿದ್ದ ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನು ವಜಾಗೊಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಗೆ ನೀಡಿದೆ.
ವೃತ್ತಿಪರ ಕೋರ್ಸ್ ಗಳು ಹಾಗೂ ವಿವಿಧ ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಸುವ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ (ವ್ಯಾಪಂ) ಹಗರಣ ಕಳೆದ ಹಲವು ವರ್ಷಗಳಿಂದ ದೇಶದಾದ್ಯಂತ ಸದ್ದು ಮಾಡುತ್ತಿದ್ದು, ರಾಜ್ಯಪಾಲ ರಾಮ್ ನರೇಶ್ ಯಾದವ್ ಅವರನ್ನು ವಜಾಗೊಳಿಸಬೇಕೆಂಬ ಕೂಗು ಬಲವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸುಪ್ರೀಂಕೋರ್ಟ್ ಈ ಕುರಿತಂತೆ ವಿಚಾರಣೆ ನಡೆಸುವುದಾಗಿ ಒಪ್ಪಿಗೆ ಸೂಚಿಸಿದೆ.
ಈ ಕುರಿತಂತೆ ಮಾತನಾಡಿರುವ ಮುಖ್ಯ ನ್ಯಾಯಾಧೀಶ ಹೆಚ್.ಎಲ್.ದತ್ತು ಅವರು, ವ್ಯಾಪಂ ಹಗರಣ ಸಂಬಂಧ ರಾಮ್ ನರೇಶ್ ಯಾದವ್ ಅವರನ್ನು ವಜಾಗೊಳಿಸುವಂತೆ ಅರ್ಜಿ ದಾಖಲಾಗಿದ್ದು, ಅರ್ಜಿ ವಿಚಾರಣೆ ನಡೆಸಲು ನ್ಯಾಯಾಲಯವು ಒಪ್ಪಿಗೆ ನೀಡಿದೆ. ಈ ಕುರಿತಂತೆ ಜುಲೈ 9 ರಂದು ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ವ್ಯಾಪಂ ಹಗರಣಕ್ಕೆ ಸಂಬಂಧಿಸಿದಂತೆ ಆರೋಪಿಗಳು ಹಾಗೂ ಅದರ ತನಿಖೆಗೆ ಹೊರಟವರ ನಿಗೂಢ ಸಾವಿನ ಸಂಖ್ಯೆಗಳು ದಿನಕಳೆಯುತ್ತಿದ್ದಂತೆ ಹೆಚ್ಚಾಗುತ್ತಿದ್ದು, ನಿನ್ನೆಯಷ್ಟೇ ವೈದ್ಯ ಕಾಲೇಜಿನ ಡೀನ್ ಡಾ.ಅರುಣ್ ಶರ್ಮಾ ಅವರು ಅನಾರೋಗ್ಯದ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದಲ್ಲದೆ ಇಂದು ಸಹ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಅನಾಮಿಕ ಕುಶ್ವಾ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಇದರಂತೆ ಪ್ರಕರಣ ಸಂಬಂಧ 27 ಮಂದಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಪ್ರಕರಣ ಸಂಬಂಧ ಸಾಕ್ಷ್ಯ ಹಾಗೂ ಆರೋಪಿಗಳು ಎನ್ನಲಾಗುತ್ತಿದ್ದವರೆಲ್ಲರೂ ನಿಗೂಢವಾಗಿ ಸಾವನ್ನಪ್ಪುತ್ತಿರುವುದರಿಂದ ತನಿಖೆ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ ಇತ್ತೀಚಗಷ್ಟೇ ಸುಪ್ರೀಂಕೋರ್ಟ್ ತನಿಖೆ ನಡೆಸಲು ವಿಶೇಷ ತನಿಖಾಧಿಕಾರಿಗಳಿಗೆ ಮತ್ತೆ 3 ತಿಂಗಳ ಕಾಲ ಕಾಲಾವಕಾಶ ನೀಡಿತ್ತು.
ಹಗರಣ ಸಂಬಂಧ ನಿಗೂಢ ಸಾವು ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದರೂ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ನಿರಾಕರಿಸಿದ್ದಾರೆ.
Advertisement