
ಜೋದ್ಪುರ: ಪಾಕಿಸ್ತಾನಿ ಸೈನಿಕರು ತಮಗೆ ಅವಕಾಶ ಸಿಕ್ಕಾಗೆಲ್ಲ, ಡ್ರೋಣ್ ಮತ್ತು ರಿಮೋಟ್ ಕಂಟ್ರೋಲರ್ ಕಣ್ಗಾವಲು ವಿಮಾನಗಳ ಮೂಲಕ ಭಾರತದ ಗಡಿ ಪ್ರದೇಶದಲ್ಲಿ ಗೂಢಾಚರ್ಯೆ ನಡೆಸುತ್ತಲೇ ಇರುತ್ತದೆ ಎಂಬ ಆಘಾತಕಾರಿ ಸಂಗತಿಯನ್ನು ಬಿಎಸ್ಎಫ್ ಅಧಿಕಾರಿಗಳು ಹೊರ ಹಾಕಿದ್ದಾರೆ.
`ತಂತ್ರಜ್ಞಾನವನ್ನು ಬಹಳ ಚೆನ್ನಾಗಿ ದುರ್ಬಳಕೆ ಮಾಡಿಕೊಳ್ಳುವ ಪಾಕಿಸ್ತಾನ, ಭಾರತದ ಮೇಲೆ ಸದಾ ನಿಗಾ ಇಡುತ್ತದೆ. ಆದರೆ, ಪಾಕಿಸ್ತಾನದ ಈ ನಡೆಗೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಗೂಢಚರ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ, ಕೆಲ ಪ್ರದೇಶಗಳಲ್ಲಿ ಇಂಥ ಕುಕೃತ್ಯಗಳು ನಡೆಯುತ್ತಿರುವ ಕುರಿತು ಮಾಹಿತಿ ಇದೆ ಎಂದು ಗಡಿರಕ್ಷಣಾ ಪಡೆಯ(ಬಿಎಸ್ಎಫ್) ಡಿಐಜಿ ರವಿ ಗಾಂಧಿ ತಿಳಿಸಿದ್ದಾರೆ.
` ಡ್ರೋಣ್ ಮತ್ತು ಯುಎವಿ( ರಿಮೋಟ್ ಕಂಟ್ರೋಲರ್ ಕಣ್ಗಾವಲು ವಿಮಾನ)ಗಳನ್ನು ಭಾರತದ ಕಡೆ ಹಾರಿಬಿಟ್ಟಿರುವ ಅನುಮಾನಗಳಿವೆ. ಆದರೆ, ಅವುಗಳು ಏನೆಂದು ನಮಗೂ ಸರಿಯಾಗಿ ತಿಳಿದುಬಂದಿಲ್ಲ. ಈ ಕುರಿತು ಪಾಕ್ ರೇಂಜರ್ಗಳ ಗಮನಕ್ಕೆ ತಂದು ಎಚ್ಚರಿಕೆ ನೀಡಿದ ನಂತರ ಇಂಥ ಘಟನೆ ಕಡಿಮೆಯಾಗಿವೆ. ಆದರೆ, ದೇಶದ ಗಡಿ ಭಾಗಗಳಾದ ಬರ್ಮೇರ್, ಜೈಸಲ್ಮೇರ್, ಬಿಕನೇರ್, ಗಂಗಾನಗರಗಳಲ್ಲಿ ಪಾಕ್ ಸೇನೆ ಕ್ಯಾಮೆರಾ ಅಳವಡಿಸಿದೆ. ನಮ್ಮ ಆಕ್ಷೇಪದ ಹಿನ್ನೆಲೆಯಲ್ಲಿ ಅವುಗಳನ್ನು ತೆರವು ಮಾಡಲಾಯಿತಾದರೂ, ಇನ್ನೂ ಕೆಲ ಕ್ಯಾಮೆರಾ ಕೆಲಸ ಮಾಡುತ್ತಿರುವ ಶಂಕೆಯಿದೆ ಎಂದು ಗಾಂಧಿ ತಿಳಿಸಿದ್ದಾರೆ.
ಈ ಮಧ್ಯೆ, ಬಿಕನೇರ್ ಬಳಿ ಪಾಕ್ ನಡೆಸುತ್ತಿದ್ದ ಜಿಪ್ಸಂ ಗಣಿಗಾರಿಕೆಯನ್ನು ಬಿಎಸ್ ಎಫ್ ನಿಯಂತ್ರಿಸಿದ್ದು, ಹಲವು ಟ್ರಕ್ ಗಳು ಮತ್ತು ಕೆಲ ಮಂದಿಯನ್ನು ಪೊಲೀಸರಿಗೆ ಒಪ್ಪಿಸಿದೆ. ಹೀಗಿದ್ದರೂ, ಗಡಿಯ ಲ್ಲಿ ಅಕ್ರಮ ಗಣಿಗಾರಿಕೆ, ಅಕ್ರಮ ಚಟುವಟಿಕೆ ನಡೆಯುತ್ತಿವೆ. ಇವು ದೇಶದ ಭದ್ರತೆಗೆ ಸವಾಲುವೊಡ್ಡಿವೆ ಎಂದೂ ಅಧಿಕಾರಿ ಆತಂಕ ವ್ಯಕ್ತಪಡಿಸಿದ್ದಾರೆ.
Advertisement