
ಬೆಂಗಳೂರು: ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ಪುನಾರಚಿಸಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಮೂರು ಹಂತದ ಆಡಳಿತ ರಚಿಸುವ ಶಿಫಾರಸು ವರದಿಯನ್ನು ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್ ಪಾಟೀಲ್ ನೇತೃತ್ವದ ತ್ರಿಸದಸ್ಯ ಸಮಿತಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ವಿ ರವಿ ಚಂದರ್, ಸಿದ್ದಯ್ಯ ಅವರನ್ನೊಳಗೊಂಡ ಪಾಟಿಲ್ ನೇತೃತ್ವದ ಸಮಿತಿ, ಬೆಂಗಳೂರು ಭವಿಷ್ಯದ ಹಾದಿ ಬಿಬಿಎಂಪಿ ಪುನಾರಚನೆ ಅಂತಿಮ ವರದಿಯನ್ನು ಸಿ.ಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿತು. ಬಿಬಿಎಂಪಿ ವಾರ್ಡ್ ಗಳು ಅವಿಜ್ನಾನಿಕವಾಗಿ ವಿಂಗಡಣೆಯಾಗಿದ್ದು ವರ್ಷದಿಂದ ವರ್ಷಕ್ಕೆ ಆರ್ಥಿಕವಾಗಿ ಅಧೋಗತಿಯತ್ತ ಸಾಗುತ್ತಿರುವುದಕ್ಕೆ ವಿಭಜನೆಯೇ ಸೂಕ್ತ ಪರಿಹಾರ ಎಂದು ಸರ್ಕಾರ ನಿರ್ಧರಿಸಿತ್ತು. ಇದಕ್ಕಾಗಿ 9 ತಿಂಗಳ ಹಿಂದೆ ರಚಿಸಿದ್ದ ತಜ್ಞರ ಸಮಿತಿ, ಮೂರು ಹಂತಗಳ ಹಾಗೂ ಐದು ಪಾಲಿಕೆಗಳ ವ್ಯವಸ್ಥೆ ರಚಿಸಬೇಕೆಂದು ವರದಿ ನೀಡಿದೆ.
ಏರಿಕೆಯಾಗುತ್ತಿರುವ ಜನಸಂಖ್ಯೆ ಅಭಿವೃದ್ಧಿಯ ವೇಗ ಹಾಗೂ ಸಂಪನ್ಮೂಲ ಹೆಚ್ಚಳದ ಗತಿ ಆಧರಿಸಿ ಪುನಾರಚನೆ ಶಿಫಾರಸು ಮಾಡಲಾಗಿದೆ.
ಈಗಿರುವ 1 ಕೋಟಿ ಜನಸಂಖ್ಯೆ 2040 ವೇಳೆಗೆ 2 ಕೋಟಿಗೆ ಏರಿಕೆಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಶಿಫಾರಸು ಮಾಡಲಾಗಿದೆ. 3 ಹಂತದ ಆಡಳಿತ ರಚನೆಯಲ್ಲಿ ಮೊದಲಿಗೆ ವಾರ್ಡ್ ಸಮಿತಿಗಳು ಬರುತ್ತವೆ. ನಂತರ ಉತ್ತರ ಕೇಂದ್ರ ಪಶ್ಚಿಮ, ದಕ್ಷಿಣ ಹಾಗೂ ಪೂರ್ವ ಎಂಬ 5 ಮಹಾನಗರ ಪಾಲಿಕೆ ರಚಿಸಲಾಗುತ್ತದೆ. ಇವುಗಳನ್ನು ನಿಯಂತ್ರಿಸುವ ಒಂದೇ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವಿರುತ್ತದೆ.
ಪರಿಣಾಮಕಾರಿಯಲ್ಲದ ಆಡಳಿತ, ನಾಗರಿಕರ ಧ್ವನಿಗೆ ಬೆಲೆ ಇಲ್ಲದಿರುವುದು, ಕಾಮಗಾರಿಗಳಲ್ಲಿ ಹಣದ ಸೋರಿಕೆ, ಆರ್ಥಿಕ ನಿರ್ವಹಣೆಯಲ್ಲಿ ಅವ್ಯವಸ್ಥೆ ಅನುಷ್ಠಾನದಲ್ಲಿ ಲೋಪಗಳು ಸೇರಿದಂತೆ ಈಗಿನ ಬಿಬಿಎಂಪಿಯಲ್ಲಿ ಹಲವು ಸಮಸ್ಯೆಗಳಿದ್ದು ಇದನ್ನು ನಿವಾರಿಸಲು ಪುನಾರಚನೆಯ ಪರಿಹಾರ ಕಂಡುಕೊಳ್ಳಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ: ಬಿಬಿಎಂಪಿ 709.5 ಚ.ಕಿ. ಚದರ ವ್ಯಾಪ್ತಿಯಲ್ಲಿದೆ. ಆದರೆ 2025 ವೇಳೆಗೆ ಜನಸಂಖ್ಯೆ ಏರಿಕೆಯಾಗಿರುವುದರಿಂದ ಈ ವಿಸ್ತೀರ್ಣ ಸಾಲುವುದಿಲ್ಲ. ಹೀಗಾಗಿ ಬಿಡಿಎ, ಬಿಎಂಪಿ ಸೇರಿದಂತೆ ರೂಪುಗೊಂಡ 1 ,307 ಚ.ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರಿಸಬಹುದು ಎಂದು ಹೇಳಲಾಗಿದೆ.
5 -10 ವರ್ಷಗಳಲ್ಲಿ ಪ್ರೌಡಾವಸ್ಥೆ ತಲುಪಿದ ನಂತರ ಜಿಬಿಎ ನೇರವಾಗಿ ಆಡಳಿತ ನಡೆಸಬಹುದು ಎಂದು ವರದಿ ತಿಳಿಸಿದೆ. ಜಿಬಿಎ 34 ಸದಸ್ಯರನ್ನು ಹೊಂದಿರುತ್ತದೆ. ನಾಗರಿಕರ ದೂರುಗಳಿಗೆ ಪರಿಹಾರ ಒದಗಿಸಲು ಜಿಬಿಎಗೆ ಓಂಬಡ್ಸ್ ಮೆನ್ ನೇಮಕಕ್ಕೆ ಸಲಹೆ ನೀಡಲಾಗಿದೆ.
Advertisement