ಕಾಮೆಡ್-ಕೆ: ಸೀಟ್ ಬ್ಲಾಕರ್ ಪತ್ತೆ

ಮಧ್ಯಪ್ರದೇಶದ ವ್ಯಾಪಂ ಹಗರಣ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿರುವಾಗಲೇ ಕರ್ನಾಟಕದಲ್ಲಿ ಸೀಟ್ ಬ್ಲ್ಯಾಕಿಂಗ್ ಗೆ ಪ್ರಯತ್ನ ನಡೆಸಿರುವ ತಾಜಾ ಪ್ರಕರಣ ಸೋಮವಾರ ನಡೆದಿದೆ...
ಕಾಮೆಡ್-ಕೆ: ಸೀಟ್ ಬ್ಲಾಕರ್ ಪತ್ತೆ (ಸಾಂದರ್ಭಿಕ ಚಿತ್ರ)
ಕಾಮೆಡ್-ಕೆ: ಸೀಟ್ ಬ್ಲಾಕರ್ ಪತ್ತೆ (ಸಾಂದರ್ಭಿಕ ಚಿತ್ರ)

ಬೆಂಗಳೂರು: ಮಧ್ಯಪ್ರದೇಶದ ವ್ಯಾಪಂ ಹಗರಣ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿರುವಾಗಲೇ ಕರ್ನಾಟಕದಲ್ಲಿ ಸೀಟ್ ಬ್ಲ್ಯಾಕಿಂಗ್ ಗೆ ಪ್ರಯತ್ನ ನಡೆಸಿರುವ ತಾಜಾ ಪ್ರಕರಣ ಸೋಮವಾರ ನಡೆದಿದೆ.

ಮೆಡಿಕಲ್ ಮತ್ತು ಡೆಂಟಲ್ ಸೀಟು ಹಂಚಿಕೆಗಾಗಿ ಕಾಮೆಡ್-ಕೆ ಸೋಮವಾರದಿಂದ ರಾಷ್ಟ್ರೀಯ ಮಟ್ಟದ ಕೌನ್ಸೆಲಿಂಗ್‍ನ್ನು ಜಯನಗರ ಎನ್‍ಎಂಕೆಆರ್‍ವಿ ಕಾಲೇಜಿನಲ್ಲಿ ಆರಂಭಿಸಿತ್ತು. ಈ ವೇಳೆ ಹರಿಯಾಣ ಮೂಲಕ ವಿದ್ಯಾರ್ಥಿಯೊಬ್ಬ ಸೀಟ್ ಬ್ಲಾಕರ್‍ನೊಂದಿಗೆ ಕೌನ್ಸೆಲಿಂಗ್ ಕೇಂದ್ರಕ್ಕೆ ಬಂದಿದ್ದು, ಸೀಟ್ ಬ್ಲಾಕ್ ಮಾಡಲು ತಯಾರಿ ನಡೆಸಿದ್ದ. ದಾಖಲೆ ಪರಿಶೀಲನೆ ವೇಳೆ ಅನುಮಾನ ಬಂದಾಗ ಕಾಮೆಡ್-ಕೆ ಸಿಬ್ಬಂದಿ ಆತನ ದಾಖಲೆಯನ್ನು ಎರಡು-ಮೂರು ಹಂತದಲ್ಲಿ ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಆತ ಕಾಮೆಡ್-ಕೆ ಪರೀಕ್ಷೆ ಬರೆದಿದ್ದರೂ, ರ್ಯಾಂಕ್ ಕಾರ್ಡ್ ತಿದ್ದಿ ತಂದಿರುವುದು ಈ ವೇಳೆ ಸಾಬೀತಾಯಿತು.

ಆತ ನೈಜವಾಗಿ ಕಾಮೆಡ್-ಕೆ ಸಿಇಟಿಯಲ್ಲಿ 117 ಅಂಕ ಪಡೆದಿದ್ದು 10156ನೇ ರ್ಯಾಂಕ್ ಪಡೆದುಕೊಂಡಿದ್ದ. ಆದರೆ, ರ್ಯಾಂಕ್ ಕಾರ್ಡ್ ನಲ್ಲಿ 10156ರ ಸಂಖ್ಯೆಯಲ್ಲಿ 101ನ್ನು ಅಳಿಸಿ 56 ಎಂದು ಮಾತ್ರ ಕಾಣುವಂತೆ ಮಾಡಿದ್ದ. ಹಾಗೆಯೇ 56ನೇ ರ್ಯಾಂಕ್ ಎಂದು ತಿದ್ದಿದ್ದ. ಕಾಮೆಡ್-ಕೆ ಸಿಬ್ಬಂದಿ ಗೌಪ್ಯವಾಗಿ ಸಂಪೂರ್ಣ ಮಾಹಿತಿಯನ್ನು ಪರಿಶೀಲಿಸಿದಾಗ ಈತ ರ್ಯಾಂಕ್ ಕಾರ್ಡ್ ತಿದ್ದಿರುವುದು ಗೋಚರವಾಯಿತು. ತಕ್ಷಣವೇ ಆತನನ್ನು ಹಿಡಿದು ಜಯನಗರ ಠಾಣೆಗೆ ಒಪ್ಪಿಸಲಾಯಿತು.

ಠಾಣೆಯಲ್ಲಿ ಹೈ ಡ್ರಾಮ: ಕಾಮೆಡ್-ಕೆ ಲಿಖಿತ ದೂರು ನೀಡಿದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ಹಿಂದೆ ಮುಂದೆ ನೋಡಿದ ಘಟನೆ ಠಾಣೆಯಲ್ಲಿ ನಡೆದಿದೆ. ಪ್ರತ್ಯಕ್ಷದರ್ಶಿಗಳು ತಿಳಿಸುವಂತೆ, ಸಂಪೂರ್ಣ ದಾಖಲೆ ಸಹಿತವಾಗಿ ದೂರುಕೊಟ್ಟರೂ ಪೊಲೀಸರು ಪ್ರಕರಣ ದಾಖಲಿಸಲು ತಡ ಮಾಡಿದ್ದಾರೆ. ಅಲ್ಲದೇ ಹಿರಿಯ ಅಧಿಕಾರಿಗಳಿಂದ ಪ್ರಕರಣ ದಾಖಲಿಸದಂತೆ ಒತ್ತಡ ತಂತ್ರವೂ ನಡೆಯಿತು. ಇದೇ ವೇಳೆ ಠಾಣೆಯಲ್ಲಿ ಆ ವಿದ್ಯಾರ್ಥಿ ಮತ್ತು ಸೀಟ್ ಬ್ಲಾಕರ್ ಬಳಿ ಮತ್ತೊಂದು ರ್ಯಾಂಕ್ ಕಾರ್ಡ್ ಇರುವುದೂ ಖಚಿತವಾಯಿತು. 76ನೇ ರ್ಯಾಂಕ್, 76 ಅಂಕ ಇರುವ ಅಂಕಪಟ್ಟಿಯದು. ವಾಸ್ತವವಾಗಿ 76 ಅಂಕಗಳಿಗೆ ರ್ಯಾಂಕ್ ನೀಡುವ ವ್ಯವಸ್ಥೆ ಕಾಮೆಡ್-ಕೆಯಲ್ಲಿಲ್ಲ. ಜತೆಗೆ ಕಾಮೆಡ್-ಕೆ ಸಿಇಟಿ ಮುಗಿದ ನಂತರ ಓಎಂಆರ್ ಶೀಟ್‍ನ ನಕಲು ಪ್ರತಿಯನ್ನು ನೀಡುವುದರಿಂದ ಅದರಲ್ಲಿ 117 ಅಂಕ ಬಂದಿರುವುದೂ ಸಹ ಠಾಣೆಯಲ್ಲಿ ಸ್ಪಷ್ಟವಾಗಿ, ಇದೊಂದು ಸೀಟ್ ಬ್ಲಾಕಿಂಗ್‍ಗೆ ಬಂದ ಪ್ರಕರಣವೆಂಬುದೇ ಖಚಿತವಾಯಿತು.

ಕೌನ್ಸೆಲಿಂಗ್ ಹಾಲ್‍ನಲ್ಲಿ ಬೆಳಿಗ್ಗೆ ನಡೆದ ಪತ್ತೆ ಪ್ರಕರಣದಿಂದಾಗಿ ಸೀಟ್ ಬ್ಲಾಕಿಂಗ್‍ಗೆ ಬಂದಿದ್ದ ಇನ್ನೊಂದಿಷ್ಟು ಮಂದಿ ಕೌನ್ಸೆಲಿಂಗ್ ಹಾಲ್‍ನಿಂದ ಕಾಲ್ಕಿತ್ತರೆಂದು ಮೂಲಗಳು ತಿಳಿಸಿವೆ. ಕಾಮೆಡ್-ಕೆ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಅನುಮಾನಾಸ್ಪದ ದಾಖಲೆಯನ್ನು ಪತ್ತೆ ಮಾಡಿದ್ದು ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಉಳಿದ ಬೆಳವಣಿಗೆ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ತಿಳಿಸಿದರು

ಮೆಡಿಕಲ್ ಸೀಟು ಬಹುತೇಕ ಭರ್ತಿ
ವೈದ್ಯಕೀಯ ಸೀಟು ಹಂಚಿಕೆಗಾಗಿ ಕಾಮೆಡ್-ಕೆ ಸೋಮವಾರದಿಂದ ಆರಂಭಿಸಿದ ಕೌನ್ಸೆಲಿಂಗ್‍ನ ಮೊದಲ ದಿನದಲ್ಲಿ ಬಹುತೇಕ ಎಲ್ಲಾ ಸೀಟುಗಳು ಭರ್ತಿಯಾದವು. ಒಟ್ಟು 12 ಮೆಡಿಕಲ್ ಕಾಲೇಜುಗಳ 688 ಸೀಟುಗಳು ಕೌನ್ಸೆಲಿಂಗ್‍ಗೆ ಲಭ್ಯವಿತ್ತು. ಈ ಪೈಕಿ ತುಳು ಮೈನಾರಿಟಿ ಕಾಲೇಜಿನ 35 ಸೀಟು (ತುಳು), 15 ಕ್ರಿಶ್ಚಿಯನ್ ಸೀಟು ಹೊರತುಪಡಿಸಿದಂತೆ ಜನರಲ್ ಮೆರಿಟ್‍ನ 17 ಸೀಟುಗಳಷ್ಟೇ ಉಳಿಯಿತು.

ಒಟ್ಟಾರೆ 633 ಸೀಟುಗಳು ಮೊದಲ ದಿನವೇ ಭರ್ತಿಯಾಯಿತು. ಈ ಬಾರಿ ಮೆಡಿಕಲ್ ಸೀಟು ಹಂಚಿಕೆಯ ಮೊದಲ ಸುತ್ತಿನ ಕೌನ್ಸೆಲಿಂಗ್‍ಗೆ ಎರಡು ಕಾಲೇಜುಗಳ ಸೀಟುಗಳು ಲಭ್ಯವಾಗಲಿಲ್ಲ. ಶ್ರೀದೇವಿ ಮೆಡಿಕಲ್ ಕಾಲೇಜು ಮತ್ತು ಬಿಜಿಎಸ್ ಮೆಡಿಕಲ್ ಕಾಲೇಜಿನ ಪ್ರವೇಶ ಮಾನ್ಯತೆಯನ್ನು ಎಂಸಿಐ ತಡೆ ಹಿಡಿದಿರುವುದರಿಂದ ಸದ್ಯಕ್ಕೆ 120 ಸೀಟುಗಳು ಕೊರತೆ ಬಿದ್ದವು. ಅಚ್ಚರಿ ಎಂದರೆ ಮೊದಲ ದಿನದ ಕೌನ್ಸೆಲಿಂಗ್‍ನಲ್ಲಿ ಒಂದೇ ಒಂದು ಡೆಂಟಲ್ ಸೀಟು ಖಾಲಿಯಾಗಲಿಲ್ಲ. 25 ಡೆಂಟಲ್ ಕಾಲೇಜುಗಳ 700ಕ್ಕೂ ಹೆಚ್ಚು ಡೆಂಟಲ್ ಸೀಟುಗಳು ಇದ್ದು, ಇದು ಮಂಗಳವಾರದಿಂದ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಕಾಮೆಡ್-ಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com