
ನವದೆಹಲಿ: ಉತ್ತರಪ್ರದೇಶದಲ್ಲಿ ನಿಷ್ಠಾವಂತ ಅಧಿಕಾರಿಗಳಿಗೆ ಕಾಲವಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಎಸ್ಪಿ ಮುಖಂಡರ ಅಕ್ರಮ ವಿರುದ್ಧ ಧ್ವನಿ ಎತ್ತಿದ್ದ ಹಾಗೂ ತಮಗೆ ಬೆದರಿಕೆ ಹಾಕಿದ್ದ ಪಕ್ಷದ ಮುಖಂಡ ಮುಲಾಯಂ ವಿರುದ್ಧ ದೂರು ನೀಡಿದಕ್ಕಾಗಿ ಐಪಿಎಸ್ ಅಧಿಕಾರಿ ಅಮಿತಾಭ್ ಠಾಕೂರ್ ಗೆ ಉತ್ತರಪ್ರದೇಶ ಸರ್ಕಾರ ಅಮಾನತು ಶಿಕ್ಷ ನೀಡಿದೆ.
ಮುಲಾಯಂ ಬೆದರಿಕೆ ಕರೆ ಆಡಿಯೋ ಕ್ಲಿಪ್ ಬಹಿರಂಗ ಮಾಡಿದ ಠಾಕೂರ್ ವಿರುದ್ಧ ಭಾನುವಾರ ಅತ್ಯಾಚಾರ ಪ್ರಕರಣ ದಾಖಲಾಗಿತ್ತು. ಇದು ಸೇಡಿನ ಕ್ರಮ ಎಂದು ಆರೋಪಿ ಸಿದ್ದ ಠಾಕೂರ್ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳನ್ನು ಸೋಮವಾರ ಭೇಟಿಯಾಗಿ ನೋವು ತೋಡಿಕೊಂಡಿದ್ದರು. ಜತೆಗೆ, ತಮ್ಮ ಮೇಲಿನ ಅತ್ಯಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದರು.
ಇದಾದ ಬೆನ್ನಲ್ಲೇ ಅಮಾನತು ಆದೇಶ ಹೊರಬಿದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಠಾಕೂರ್, ಅಮಾನತು ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯೂ ಆಗಿರುವ ಠಾಕೂರ್ ಪತ್ನಿ ನೂತನ್ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ ಸಚಿವ ಗಾಯತ್ರಿ ಪ್ರಸಾದ್ ಪ್ರಜಾಪತಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ ಬಳಿಕ ಬೆದರಿಕೆ ಕರೆ ಬರಲು ಆರಂಭಿಸಿತ್ತು.
ಇದೇ ವಿಚಾರವಾಗಿ ಕರೆ ಮಾಡಿದ್ದ ಮುಲಾಯಂ ಹೊಂದಾಣಿಕೆ ಮಾಡಿಕೊಂಡು ಹೋಗದಿದ್ದರೆ ಪರಿಸ್ಥಿತಿ ನೆಟ್ಟಗಿರದು ಎಂದು ಬೆದರಿಕೆ ಹಾಕಿ ದ್ದರು. ಅಧಿಕಾರಿ ಠಾಕೂರ್ ಮೇಲೆ ಎಸ್ಪಿ ಶಾಸಕನೊಬ್ಬ ಹಿಂದೆ ಹಲ್ಲೆಯನ್ನೂ ನಡೆಸಿದ್ದ.
ಅಪ್ಪ ಮಾಡಿದ್ದು ಸರಿ ಎಂದ ಸಿಎಂ: ಬೆದರಿಕೆ ಹಾಕಿರುವ ಮುಲಾಯಂ ಕ್ರಮವನ್ನು ಪುತ್ರ, ಸಿಎಂ ಅಖಿಲೇಶ್ ಯಾದವ್ ಸಮರ್ಥಿಸಿಕೊಂಡಿದ್ದಾರೆ. ಠಾಕೂರ್ ವಿಚಾರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕೆಂದಷ್ಟೇ ಮುಲಾಯಂ ಹೇಳಿದ್ದರು. ಮುಲಾಯಂ ನೀಡಿದ್ದು ಸಲಹೆಯೇ ಹೊರತು ಬೆದರಿಕೆ ಅಲ್ಲ ಎಂದಿದ್ದಾರೆ ಅಖಿಲೇಶ್.
Advertisement