ನೆಟ್ ನ್ಯೂಟ್ರಾಲಿಟಿಗೆ ಡಾಟ್ ಸಮಿತಿ ಅಸ್ತು

ಇತ್ತೀಚೆಗೆ ಭಾರೀ ಚರ್ಚೆಗೊಳಗಾಗಿದ್ದ ಅಂತರ್ಜಾಲ ಸಮಾನತೆ (ನೆಟ್ ನ್ಯೂಟ್ರಾಲಿಟಿ)ಗೆ ದೂರಸಂಪರ್ಕ ಸಚಿವಾಲಯದ ಸಮಿತಿ ಒಪ್ಪಿಗೆ ಸೂಚಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಇತ್ತೀಚೆಗೆ ಭಾರೀ ಚರ್ಚೆಗೊಳಗಾಗಿದ್ದ ಅಂತರ್ಜಾಲ ಸಮಾನತೆ (ನೆಟ್ ನ್ಯೂಟ್ರಾಲಿಟಿ)ಗೆ ದೂರಸಂಪರ್ಕ ಸಚಿವಾಲಯದ ಸಮಿತಿ (DOT) ಒಪ್ಪಿಗೆ ಸೂಚಿಸಿದೆ. ದೇಶದಲ್ಲಿ ಉಚಿತ ಇಂಟರ್‌ನೆಟ್ ನೀಡುವ ಉದ್ದೇಶದಿಂದ ಎ.ಕೆ. ಭಾರ್ಗವ್ ಅವರ ನೇತೃತ್ವದ ಸಮಿತಿ ನೆಟ್ ನ್ಯೂಟ್ರಾಲಿಟಿಗೆ ಶಿಫಾರಸು ಮಾಡಿ 100 ಪುಟಗಳ ವರದಿ ತಯಾರಿಸಿದೆ. ಈ ವರದಿಯಲ್ಲಿ ಭಾರತದಲ್ಲಿ ನೆಟ್ ನ್ಯೂಟ್ರಾಲಿಟಿ ಬೇಕೆಂಬ ಬೇಡಿಕೆಗೆ ಸಮಿತಿ ಒಮ್ಮತ ಸೂಚಿಸಿದೆ.

ಅದೇ ವೇಳೆ ಸೇವಾ ಪೂರೈಕೆದಾರರ ಲೈಸನ್ಸ್ ನಿಬಂಧನೆಗಳಲ್ಲಿಯೂ ನೆಟ್ ನ್ಯೂಟ್ರಾಲಿಟಿಯನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಸಮಿತಿ ಹೇಳಿದೆ.

ಇಂಟರ್‌ನೆಟ್ ಬಳಕೆದಾರರಿಂದ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಟೆಲಿಕಾಂ ಕಂಪನಿಗಳ ಬಗ್ಗೆ ಹಾಗೂ ನೆಟ್ ನ್ಯೂಟ್ರಾಲಿಟಿ ಬಗ್ಗೆಯೂ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ನೀಡಲಾಗಿತ್ತು. ಇದರಲ್ಲಿ ಲಕ್ಷಗಟ್ಟಲೆ ಜನ ನೆಟ್ ನ್ಯೂಟ್ರಾಲಿಟಿ ಬೇಕೆಂದು ಅಭಿಪ್ರಾಯ ಮಂಡಿಸಿದ್ದರು.

ನೆಟ್ ನ್ಯೂಟ್ರಾಲಿಟಿ ಬೇಕೆಂಬ ಕೂಗು ಸಾಮಾಜಿಕ ತಾಣದಲ್ಲಿ ಭಾರೀ ಗಮನ ಸೆಳದಿತ್ತು. ಫೇಸ್ ಬುಕ್, ಟ್ವಿಟರ್, ವಾಟ್ಸಾಪ್ ಮೊದಲಾದ ಜನಪ್ರಿಯ ಅಪ್ಲಿಕೇಶನ್‌ಗಳು, ಆನ್‌ಲೈನ್ ಶಾಪಿಂಗ್ ತಾಣಗಳನ್ನು ಬಳಸಲು ಹೆಚ್ಚಿನ ಶುಲ್ಕ ನೀಡಬೇಕೆಂದು ಇಂಟರ್‌ನೆಟ್ ಸೇವಾ ಪೂರೈಕೆದಾರರು ಒತ್ತಾಯಿಸಿದ್ದು, ಇದರ ವಿರುದ್ಧ ನೆಟ್ ನ್ಯೂಟ್ರಾಲಿಟಿ ಬೇಕೆಂಬ ಕೂಗು ಹೆಚ್ಚು ಶಕ್ತವಾಗಿತ್ತು.

ಆದ್ದರಿಂದಲೇ ನೆಟ್ ನ್ಯೂಟ್ರಾಲಿಟಿ ಜಾರಿಗೆ ತರುವ ಮುನ್ನ ದೂರ ಸಂಪರ್ಕ ಸಚಿವಾಲಯ ಜನಾಭಿಪ್ರಾಯವನ್ನು ಕೇಳಿತ್ತು. 10 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ಸಮೀಕ್ಷೆಯಲ್ಲಿ ಭಾಗವಹಿಸಿ ಅಭಿಪ್ರಾಯಗಳನ್ನು ಮಂಡಿಸಿದ್ದರು.

ಏನಿದು ನೆಟ್ ನ್ಯೂಟ್ರಾಲಿಟಿ : ಸೇವಾ ಪೂರೈಕೆದಾರರಿಂದ ಡೇಟಾ ಪ್ಯಾಕ್ ಪಡೆದ ಬಳಕೆದಾರರು ತಾವು ನಿರ್ಧರಿಸಿದ ವೆಬ್‍ಸೈಟ್‍ಗಳು ಹಾಗು ಆಪ್‍ನ್ನು ಮುಕ್ತವಾಗಿ ಬಳಸುವುದೇ ನೆಟ್‍ನ್ಯೂಟ್ರಾಲಿಟಿ.
ಸೇವಾ ಪೂರೈಕೆದಾರರು ತಮಗೆ ಇಂತಿಷ್ಟು ಶುಲ್ಕ ನೀಡುವ ವೆಬ್‌ಸೈಟ್‌ಗಳನ್ನು ಮಾತ್ರ ಗ್ರಾಹಕರು ಉಚಿತವಾಗಿ ಬಳಸಲು ಬಿಡುತ್ತಾರೆ. ಹಣ ನೀಡದಿರುವ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡುತ್ತಾರೆ. ಹೀಗೆ ಹಣ ನೀಡದಿರುವ ವೆಬ್‌ಸೈಟ್‌ಗಳನ್ನು ಬಳಸಲೇ ಬೇಕೆಂದರೆ ಗ್ರಾಹಕರು ನಿಗದಿತ ಮೊತ್ತವನ್ನು ಸೇವಾ ಪೂರೈಕೆದಾರರಿಗೆ ಕಟ್ಟಬೇಕಾಗುತ್ತದೆ. ಹೀಗೆ ವೆಬ್‌ಸೈಟ್‌ಗಳು ಹಾಗೂ ಗ್ರಾಹಕರಿಂದ ಹಣ ಪೀಕುವ ಈ ಲಾಬಿಯು ನಮಗೇ ಗೊತ್ತಿಲ್ಲದೆ ನಡೆಯುವ ಪ್ರಕ್ರಿಯೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com