
ಚೆನ್ನೈ:ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಆರೋಗ್ಯದ ಬಗ್ಗೆ ಹೇಳಿಕೆ ನೀಡಿರುವ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ ಅವರ ವಿರುದ್ಧ ಹರಿಹಾಯ್ದಿರುವ ಜಯಲಲಿತಾ ಅವರ ಆಪ್ತ ಹಣಕಾಸು ಸಚಿವ ಒ.ಪನ್ನೀರ್ ಸೆಲ್ವಂ, ತಮ್ಮ ನಾಯಕಿ ಯಾವತ್ತೂ ರಾಜಕೀಯ ಉದ್ದೇಶಕ್ಕಾಗಿ ಅವರ ಪ್ರತಿಸ್ಪರ್ಧಿಗಳ ಆರೋಗ್ಯದ ಬಗ್ಗೆ ಮಾತನಾಡಿರಲಿಲ್ಲ ಎಂದು ಹೇಳಿದರು.
ಕರುಣಾನಿಧಿ ಅವರಿಗೆ ರಾಜಕೀಯ ಗಂಭೀರತೆ ಬಗ್ಗೆ ಗೊತ್ತಿಲ್ಲವೇ? ಎಂದು ಪ್ರಶ್ನಿಸಿದ ಪನ್ನೀರ್ ಸೆಲ್ವಂ, ಅವರಿಂದ ಅದನ್ನು ನಿರೀಕ್ಷಿಸುವುದು ಕೂಡ ತಪ್ಪಾಗುತ್ತದೆ ಎಂದು ಪಕ್ಷದ ಸಾರ್ವಜನಿಕ ಸಭೆಯೊಂದರಲ್ಲಿ ಹೇಳಿದರು.
ತಮಿಳುನಾಡು ರಾಜ್ಯದ ಜನತೆ ಕರುಣಾನಿಧಿಯವರನ್ನು ಮರೆತಿದ್ದಾರೆ. ಅವರನ್ನು ಮೂಲೆಯಲ್ಲಿ ಕೂರಿಸಿ ಆಗಿದೆ. ಅವರಿಗೆ ಈಗ ಹೇಗಾದರೂ ಮಾಡಿ ಮತ್ತೆ ಅಧಿಕಾರಕ್ಕೆ ಬರಬೇಕೆನ್ನುವ ಆಸೆ ಬಂದಿದೆ. ಅದು ಮಾತ್ರ ಸಾಧ್ಯವಿಲ್ಲ ಎಂದು ಪನ್ನೀರ್ ಸೆಲ್ವಂ ಹೇಳಿದರು.
ಮೊನ್ನೆ ಜುಲೈ 7 ರಂದು ಕರುಣಾನಿಧಿ ಅವರು ಸಾರ್ವಜನಿಕ ಸಭೆಯೊಂದರಲ್ಲಿ, ತಮಿಳುನಾಡು ಮುಖ್ಯಮಂತ್ರಿ ಇಲ್ಲದ ರಾಜ್ಯವಾಗಿದೆ. ಜಯಲಲಿತಾ ಅವರು ಅನಾರೋಗ್ಯಕ್ಕೀಡಾಗಿರುವುದರಿಂದ ಅವರು ತಮ್ಮ ಕೆಲಸ ನಿರ್ವಹಿಸುತ್ತಿಲ್ಲ. ಆದುದರಿಂದ ಅವರು ರಾಜಕೀಯ ಬಿಟ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ಹೇಳಿದ್ದರು.
Advertisement