

ಮುಂಬೈ/ಉಜ್ಜೈಯಿನಿ: ಮುಂಬೈ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುಂಬೈನಗರದಲ್ಲಿ ಭಾರಿ ಮಳೆಯಾಗಿದ್ದರಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ರೈಲ್ವೆ ಟ್ರ್ಯಾಕ್‍ಗಳಿಗೆ ನೀರು ನುಗ್ಗಿದ್ದರಿಂದ ಸ್ಥಳೀಯ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಹಲವು ರೈಲುಗಳನ್ನು ಸಂಚಾರ ಸಮಯ ಬದಲಿಸಲಾಗಿದೆ. ಮಳೆಯಿಂದಾಗಿ ಗೋಡೆ ಕುಸಿದು ಮುಂಬೈನಲ್ಲಿ ಇಬ್ಬರು ಮೃತಪಟ್ಟಿದ್ದು,ತುಗ್ಗು ಪ್ರದೇಶಗಳಾದ ಕುರ್ಲಾ, ಚೆಂಬಾರ್, ತಿಲಕ್‍ನಗರ, ಅಂಧೇರಿ ಹಾಗೂ ನೆರೆಯ ಠಾಣೆ ಭಾಗದಲ್ಲಿ ಸಾವಿರಾರು ಮನೆಗಳಿಗೆ ನೀರು ನುಗ್ಗಿದೆ. ಥಾಣೆ ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗಿದ್ದರಿಂದ ಜನಜೀವನಕ್ಕೆ ಅಡ್ಡಿಯಾಗಿದೆ.
ಮಧ್ಯಪ್ರದೇಶದಲ್ಲೂ ಧಾರಾಕಾರ ಮಳೆಯಾಗಿದ್ದರಿಂದ ಉಜ್ಜೈಯಿನಿಯ ಮಹಾಕಾಲೇಶ್ವರ ದೇವಾಲಯಕ್ಕೆ ನೀರು ನುಗ್ಗಿದ್ದು, ಗರ್ಭಗುಡಿ ಸಂಪೂರ್ಣ ಜಲಾವೃತವಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದೇಗುಲಪ್ರದೇಶ ಜಲಸದೃಶವಾಗಿದ್ದು, ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನೀರು ನುಗ್ಗಿದೆ. ರಾಜಸ್ಥಾನ, ಹಿಮಾಚಲ ಪ್ರದೇಶಗಳಲ್ಲಿಯೂ ಕೂಡ ಧಾರಾಕಾರ ಮಳೆಯಾಗಿದೆ.