
ಮುಂಬೈ: ಕಾಮುಕ ತಂದೆ ಆರು ವರ್ಷಗಳಿಂದ ತನ್ನ 13 ವರ್ಷದ ಮಗಳ ಮೇಲೆಯೇ ನಿರಂತರ ಅತ್ಯಾಚಾರ ಎಸಗಿದ್ದು, ಇದಕ್ಕೆ ತಾಯಿಯೂ ಮೌನ ಸಮ್ಮತಿ ಸೂಚಿಸಿರುವ ಘಟನೆ ಮುಂಬೈಯಲ್ಲಿ ನಡೆದಿದೆ.
ಮುಂಬೈನ ಶಾಲೆಯೊಂದರಲ್ಲಿ 7ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ತಂದೆಯಿಂದ ತಾನು ನಿರಂತರ ಅತ್ಯಾಚಾರಕ್ಕೆ ಒಳಗಾಗುತ್ತಿರುವ ಘಟನೆ ಬಗ್ಗೆ ತನ್ನ ಶಾಲಾ ಶಿಕ್ಷಕರಿಗೆ ಪತ್ರ ಬರೆದು ತಿಳಿಸಿದ್ದಾಳೆ. ಅಲ್ಲದೆ ತಂದೆಯ ಈ ಹೀನ ಕೃತ್ಯವನ್ನು ತನ್ನ ತಾಯಿ ತಡೆಯದೇ ಮೌನವಾಗಿರುತ್ತಿದ್ದರು ಎಂದು ಆರೋಪಿಸಿದ್ದಾಳೆ.
'ನನ್ನ ತಂದೆ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದು, ಇದಕ್ಕೆ ನನ್ನ ತಾಯಿಯೂ ಸಹಕರಿಸುತ್ತಿದ್ದಾರೆ. ಹಲವು ಬಾರಿ ತಾಯಿಯ ಕಣ್ಣೇದುರೇ ನನ್ನ ಮೇಲೆ ತಂದೆ ಅತ್ಯಾಚಾರ ಮಾಡಿದ್ದಾರೆ. ಅತ್ಯಾಚಾರದ ಬಳಿಕ ತಾಯಿ ಕೆಲವು ಪಿಲ್ಸ್ಗಳನ್ನು ನೀಡುತ್ತಿದ್ದರು. ನಾನು ಏಳು ವರ್ಷದವಳಿದ್ದಾಗಿಂದ ನನ್ನ ಮೇಲೇ ಅತ್ಯಾಚಾರ ನಡೆಯುತ್ತಿದೆ. ಇದನ್ನು ನನ್ನ ತಾಯಿಯ ಗಮನಕ್ಕೆ ತಂದರೂ, ಆಕೆ ನನಗೆ ಸಹಾಯ ಮಾಡಲಿಲ್ಲ' ಎಂದು ಬಾಲಕಿ ತಾನು ಬರೆದ ಪತ್ರದಲ್ಲಿ ತಿಳಿಸಿದ್ದಾಳೆ.
ಈ ಪತ್ರ ಓದಿ ಶಾಕ್ ಆದ ಶಾಲಾ ಶಿಕ್ಷಕ, ಕೂಡಲೇ ಬಾಲಕಿಯನ್ನು ಒಂದು ಸ್ಥಳೀಯ ಎನ್ಜಿಒ ಬಳಿ ಕರೆದೊಯ್ದು ನೆರವು ಕೇಳಿದ್ದಾರೆ. ಬಳಿಕ ಎನ್ಜಿಒ ಬಾಲಕಿಯ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದೆ.
ಪ್ರಕರಣ ದಾಖಲಿಸಿಕೊಂಡಿರುವ ವಶಿ ಪೊಲೀಸರು ಹಣ್ಣಿನ ವ್ಯಾಪಾರಿಯಾಗಿರುವ 45 ವರ್ಷದ ಕಾಮುಕ ತಂದೆಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
'ಮನೆಯಲ್ಲಿ ನನ್ನ ಸಹೋದರರು ಇಲ್ಲದ ಸಮಯದಲ್ಲಿ ತಾಯಿಯ ಎದುರಲ್ಲೇ ತಂದೆ ನನ್ನ ಮೇಲೆ ಅತ್ಯಾಚಾರ ಎಸಗುತ್ತಿದ್ದರು. ಹಲವು ಬಾರಿ ನಾನು ತಾಯಿಯ ಬಳಿ ನನ್ನ ಅಳಲನ್ನು ಹೇಳಿಕೊಂಡಿದ್ದೇನೆ. ಆದರೆ ಅವರು ಯಾವತ್ತು ಸಹಾಯ ಮಾಡಿಲ್ಲ' ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ.
ಇನ್ನು ಈ ಸಂಬಂಧ ಪೊಲೀಸರು ತಾಯಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ತಂದೆ ವಿರುದ್ಧದ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿರುವ ಮಹಾತಾಯಿ, ಕೇವಲ 15 ದಿನಗಳ ಹಿಂದಷ್ಟೇ ಅತ್ಯಾಚಾರದ ಬಗ್ಗೆ ತನ್ನ ಗಮನಕ್ಕೆ ಬಂದಿದೆ. ಬಳಿಕ ಆಕೆಯಿಂದ ದೂರವಿರುವಂತೆ ತನ್ನ ಗಂಡನಿಗೆ ಬುದ್ಧಿಹೇಳಿರುವುದಾಗಿ ತಿಳಿಸಿದ್ದಾಳೆ.
Advertisement