

ನವದೆಹಲಿ: ಕೇಂದ್ರ ಸರ್ಕಾರ ವಿಪಕ್ಷಗಳ ಜತೆ ಚರ್ಚಿಸಲು ಮುಂದಾಗಿದೆ. ಆದರೆ, ಪ್ರತಿಪಕ್ಷಗಳು ಹೆದರಿ ಓಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ವಿಪಕ್ಷಗಳು ಮಾಡಿರುವ ಆರೋಪಗಳಿಗೆ ಸೂಕ್ತ ಉತ್ತರ ನೀಡಲು ಕೇಂದ್ರ ಸರ್ಕಾರ ಸನ್ನದ್ಧವಾಗಿದೆ. ಅಲ್ಲದೆ ಚರ್ಚೆಗೂ ಸಿದ್ಧವಾಗಿದೆ ಎಂದು ಈ ಮೊದಲೇ ಹೇಳಿದ್ದೇವೆ. ಆದರೂ ವಿಪಕ್ಷಗಳು ಅಧಿವೇಶನ ನಡೆಯದಂತೆ ಮಾಡಲು ಸುಖಾಸುಮ್ಮನೆ ಗದ್ದಲ ಎಬ್ಬಿಸುತ್ತೀವೆ ಎಂದಿದ್ದಾರೆ.
ರಾಜನಾಥ್ ಸಿಂಗ್ ರ ಹೇಳಿಕೆಗೆ ಪ್ರತಿಕ್ರಿಯಿಸಿದ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಅವರು, ಮೊದಲು ಕಳಂಕಿತ ಸಚಿವರು ರಾಜಿನಾಮೆ ಕೊಡಲಿ, ಆಮೇಲೆ ಚರ್ಚೆ ಮಾಡೋಣ ಎಂದರು.
ವ್ಯಾಪಂ ಹಾಗೂ ಲಲಿತ್ ಮೋದಿ ಹಗರಣಗಳ ಕುರಿತಾಗಿ ವಿಪಕ್ಷಗಳು ಲೋಕಸಭೆಯಲ್ಲಿ ತೀವ್ರ ಗದ್ದಲ ಎಬ್ಬಿಸುತ್ತಿದ್ದು, ಕಳಂಕಿತ ಸಚಿವರ ರಾಜಿನಾಮೆಗೆ ಪಟ್ಟು ಹಿಡಿದಿವೆ. ಹೀಗಾಗಿ ಮುಂಗಾರು ಅಧಿವೇಶನದ ನಾಲ್ಕನೇ ದಿನವೂ ಕಲಾಪ ವ್ಯರ್ಥವಾಗಿದ್ದು, ಲೋಕಸಭೆ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.