ಶಿರವಸ್ತ್ರ ಧರಿಸಿ ಬಂದ ಕ್ರೈಸ್ತ ಸನ್ಯಾಸಿನಿಗೆ ಎಐಪಿಎಂಟಿ ಟೆಸ್ಟ್ ಬರೆಯಲು ತಡೆ

ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಬರೆಯಲು ಶಿರವಸ್ತ್ರ ಮತ್ತು ಶಿಲುಬೆ ಹಾರ ಧರಿಸಿ ಬಂದ ಕ್ರೈಸ್ತ ಸನ್ಯಾಸಿನಿಗೆ ಪರೀಕ್ಷೆ ಬರೆಯಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತಿರುವನಂತಪುರಂ:ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಬರೆಯಲು ಶಿರವಸ್ತ್ರ ಮತ್ತು ಶಿಲುಬೆ ಹಾರ ಧರಿಸಿ ಬಂದ ಕ್ರೈಸ್ತ ಸನ್ಯಾಸಿನಿಗೆ ಪರೀಕ್ಷೆ ಬರೆಯಲು ತಡೆಯೊಡ್ಡಿದ ಘಟನೆ ಕೇರಳದ ತಿರುವನಂತಪುರಂ ಜಿಲ್ಲೆಯಲ್ಲಿ ವರದಿಯಾಗಿದೆ.

ಇಂದು ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ (ಎಐಪಿಎಂಟಿ)ನ ಮರು ಪರೀಕ್ಷೆ ಬರೆಯಲು ಬಂದ ಕ್ರೈಸ್ತ ಸನ್ಯಾಸಿನಿ ತಲೆ ಮೇಲೆ ಶಿರವಸ್ತ್ರ ಮತ್ತು ಕೊರಳಲ್ಲಿ ಶಿಲುಬೆ ಹಾರ ಧರಿಸಿದ್ದರು. ಪರೀಕ್ಷಾ ಕೊಠಡಿಗೆ ಪ್ರವೇಶಿಸ ಬೇಕಾದರೆ ಶಿರವಸ್ತ್ರ ಮತ್ತು ಶಿಲುಬೆಯ ಹಾರವನ್ನು ತೆಗೆಯಬೇಕೆಂದು ಸಿಬ್ಬಂದಿಗಳು ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದ ಸನ್ಯಾಸಿನಿಗೆ ಪರೀಕ್ಷೆ ಬರೆಯಲು ಅನುಮತಿ ನೀಡಲಿಲ್ಲ. ಈ ವಿಷಯ ಈಗ ಕೇರಳದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಪರೀಕ್ಷಾ  ಅಧಿಕಾರಿಗಳ ವರ್ತನೆಯ ವಿರುದ್ಧ ಕೇರಳದ ಚರ್ಚ್‌ಗಳು ಟೀಕಾ ಪ್ರಹಾರ ಮಾಡಿವೆ.

ಪರೀಕ್ಷೆ ಶುರುವಾಗುವುದಕ್ಕಿಂತ ಒಂದು ಘಂಟೆಗೆ ಮುನ್ನ ಕ್ರೈಸ್ತ ಸನ್ಯಾಸಿ ಸಿಸ್ಟರ್ ಸೇಬಾ ಅವರು ಜವಾಹರ್ ಸೆಂಟ್ರಲ್ ಸ್ಕೂಲ್‌ಗೆ ತಮ್ಮ ಕಾನ್ವೆಂಟ್‌ನ ಮದರ್ ಸುಪೀರಿಯರ್ ಜತೆ ಹಾಜರಾಗಿದ್ದರು. ಅಲ್ಲಿ ತಪಾಸಣೆ ನಡೆಸುತ್ತಿದ್ದ ಸಿಬ್ಬಂದಿಗಳು ಸೇಬಾ ಅವರಲ್ಲಿ ತಲೆ ಮೇಲೆ ಧರಿಸಿದ್ದ ಶಿರವಸ್ತ್ರ ಮತ್ತು ಶಿಲುಬೆ ಹಾರ ತೆಗೆದಿಡಿ, ಪರೀಕ್ಷೆ ಮುಗಿಯುವ ವರೆಗೆ ಅದನ್ನು ಧರಿಸಬಾರುದು ಎಂದು ಹೇಳಿದ್ದಾರೆ.

ಶಿರವಸ್ತ್ರ ಮತ್ತು ಶಿಲುಬೆ ಹಾರ ತೆಗೆಯಲು ನಿರಾಕರಿಸಿದ ಸೇಬಾ ಅವರು, ನನಗೆ ಪರೀಕ್ಷೆ ಬರೆಯಲು ಬೇರೆಯೇ ಕೊಠಡಿ ಕೊಡಿ ಎಂದು ವಿನಂತಿಸಿದ್ದು, ಇದಕ್ಕೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ನಾನು ಪರೀಕ್ಷಾ ಅಧಿಕಾರಿಗಳಲ್ಲಿ ಬೇಡಿ ಕೊಂಡರೂ ಸುಪ್ರೀಂ ಕೋರ್ಟ್ ಆದೇಶ ಪ್ರಕಾರ ಈ ರೀತಿ ಉಡುಗೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡುವುದಿಲ್ಲ. ಒಂದು ದಿನ ಪವಿತ್ರ ಡ್ರೆಸ್‌ನ್ನು ತೆಗೆದಿಟ್ಟರೆ ಧಾರ್ಮಿಕ ನಂಬಿಕೆಗೇನೂ ಧಕ್ಕೆ ಬರುವುದಿಲ್ಲ, ನಾವು ಸುಪ್ರೀಂ ಆದೇಶಕ್ಕೆ ಬದ್ಧರಾಗಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದಾಗ್ಯೂ, ಸೇಬಾ ಅವರಿಗೆ ಪರೀಕ್ಷೆ ಬರೆಯಲು ನಿರಾಕರಿಸಿರುವ ಘಟನೆಯನ್ನು ಕ್ಯಾಥೋಲಿಕ್ ಬಿಷಪ್ ಕೌನ್ಸಿಲ್ ಖಂಡಿಸಿದೆ.

ಆಲ್ ಇಂಡಿಯಾ ಪ್ರಿ ಮೆಡಿಕಲ್ ಟೆಸ್ಟ್ ಬರೆಯುವ ಅಭ್ಯರ್ಥಿಗಳು ಬುರ್ಖಾ, ಸ್ಕಾರ್ಫ್ ಅಥವಾ ಇನ್ಯಾವುದೇ ರೀತಿಯ ಶಿರವಸ್ತ್ರ ಧರಿಸುವಂತಿಲ್ಲ ಎಂದು ಶುಕ್ರವಾರ ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಮಾತ್ರವಲ್ಲದೆ ಒಂದು ದಿನ ಇಂಥಾ ಉಡುಗೆಗಳನ್ನು ಧರಿಸದೇ ಇದ್ದರೆ ಧಾರ್ಮಿಕ ನಂಬಿಕೆಗಳಿಗೇನೂ ಧಕ್ಕೆ ಬರುವುದಿಲ್ಲ ಎಂದು ಸುಪ್ರೀಂ ಹೇಳಿತ್ತು.

ಮೂರು ದಿನಗಳ ಹಿಂದೆಯಷ್ಟೇ ಇಬ್ಬರು ಮುಸ್ಲಿಂ ಹುಡುಗಿಯರಿಗೆ ಶಿರವಸ್ತ್ರ ಮತ್ತು ತುಂಬು ತೋಳಿನ ಉಡುಗೆ ತೊಟ್ಟು ಪರೀಕ್ಷೆ ಬರೆಯಲು ಕೇರಳ ಹೈಕೋರ್ಟ್ ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಇಂಥಾ ಉಡುಗೆಗಳನ್ನು ಧರಿಸಿ ಪರೀಕ್ಷೆ ಬರೆಯುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com