ನಿತಿಶ್ ಕುಮಾರ್‌ಗೆ ನನ್ನ ಕಂಡ್ರೆ ಆಗಲ್ಲ, ಹೀಗಾಗಿ ಬಿಹಾರ ಅಭಿವೃದ್ಧಿಗೆ ಹಿನ್ನಡೆ: ಪ್ರಧಾನಿ ಮೋದಿ
ಮಜಾಫರ್‌ಪುರ್: ಬಿಹಾರ ವಿಧಾನಸಭೆ ಚುನಾವಣೆಗೆ ಭರ್ಜರಿ ಚಾಲನೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಬಿಹಾರಕ್ಕೆ ಸ್ವಾಗತಿಸಿದ ನಿತಿಶ್ ಅವರಿಗೆ ಅಭಿನಂದನೆ. ಆದರೆ ಹಿಂದೆ ಅವರು ಬಿಹಾರದಲ್ಲಿ ಮೋದಿಗೆ ಕಾಲಿಡಲು ಬಿಡುವುದಿಲ್ಲ ಎಂದಿದ್ದರು. ಈ ರೀತಿ ಹೇಳುವವರ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಬಿಹಾರ ಅಭಿವೃದ್ಧಿ ಸಾಧ್ಯವೆ ಎಂದು ಪ್ರಶ್ನಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು. ಆದರೆ ನನ್ನ ಕಂಡ್ರೆ ನಿತಿಶ್ ಕುಮಾರ್ ಅವರಿಗೆ ಆಗುವುದಿಲ್ಲ. ಹೀಗಾಗಿ ಬಿಹಾರದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಕೇಂದ್ರ ಸರ್ಕಾರ ಬಿಹಾರದ ಅಭಿವೃದ್ಧಿಗೆ 1.50 ಕೋಟಿ ಅನುದಾನ ನೀಡಿದೆ. ಆದರೂ ಬಿಹಾರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಪ್ರಧಾನಿ ನಿತಿಶ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ವಿದ್ಯುತ್ ಸೌಲಭ್ಯದಿಂದ ಜನಜೀವನ ಬದಲಾವಣೆ ಸಾಧ್ಯ. ಭೂತಾನ್ ಹಾಗೂ ನೇಪಾಳದಿಂದ ಬಿಹಾರಕ್ಕೆ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದರು.
ಬಿಹಾರದಲ್ಲಿ ಬದಲಾವಣೆಗಾಗಿ ಅವಕಾಶ ನೀಡಿ. 60 ತಿಂಗಳಲ್ಲಿ ನಿಮ್ಮ ಕನಸುಗಳನ್ನು ನನಸು ಮಾಡುತ್ತೇವೆ. ಬಿಜೆಪಿ ಸರ್ಕಾರ ರಚನೆಗೆ ಅವಕಾಶ ನೀಡಿ. ಬಿಹಾರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇವೆ ಎಂದು ಪ್ರಧಾನಿ ಭರವಸೆ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ