ವೇಲ್‍ಗೆ ನೋ ಅಂದ್ರು; ಮೂಗುತಿ ಬಿಚ್ಚಿ ಸಿ ಪರೀಕ್ಷೆ ಬರೆಸಿದರು!

ಕ್ರಿಸ್ತನ ಶಿಲುಬೆಯ ಲೋಲಕ, ಮತ್ತು ತಲೆವಸ್ತ್ರವನ್ನು ತೆಗೆಯಲು ಇಚ್ಛಿಸದ ಕ್ಯಾಥೋಲಿಕ್ ಸನ್ಯಾಸಿನಿಯೊಬ್ಬರಿಗೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರಂ: ಕ್ರಿಸ್ತನ ಶಿಲುಬೆಯ ಲೋಲಕ, ಮತ್ತು ತಲೆವಸ್ತ್ರವನ್ನು ತೆಗೆಯಲು ಇಚ್ಛಿಸದ ಕ್ಯಾಥೋಲಿಕ್ ಸನ್ಯಾಸಿನಿಯೊಬ್ಬರಿಗೆ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆ (ಎಐಪಿಎಂಟಿ) ಬರೆಯಲು ತಿರುವನಂತಪುರದ ಶಾಲಾ ಆಡಳಿತ ಮಂಡಳಿಯೊಂದು ಅನುಮತಿ ನಿರಾಕರಿಸಿದೆ.

ಈ ಬಾರಿ ಬಿಎಸ್‍ಸಿಯು ವೈದ್ಯಕೀಯ ಪೂರ್ವ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ವಸ್ತ್ರಸಂಹಿತೆ ನಿಗದಿ ಪಡಿಸಿತ್ತು. ಕಳೆದ ಬಾರಿ ಈ ಪ್ರವೇಶ ಪರೀಕ್ಷೆ ವೇಳೆ ಹೈಟೆಕ್ ರೀತಿಯಲ್ಲಿ ಭಾರಿ ಅಕ್ರಮ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸುಪ್ರೀಂ ಹೊಸದಾಗಿ ಪ್ರವೇಶ ಪರೀಕ್ಷೆ ನಡೆಸುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಸಿಬಿಎಸ್‍ಸಿಯು ಪರೀಕ್ಷೆ ಅಕ್ರಮ ತಡೆಯಲು ಕಠಿಣ ವಸ್ತ್ರಸಂಹಿತೆ ಜಾರಿಮಾಡಿತ್ತು.

ಅದರಂತೆ ತಿರುವನಂತಪುರದ ಜವಹಾರ್ ಸೆಂಟರ್ ಶಾಲೆಗೆ ಆಗಮಿಸಿದ್ದ ಕ್ರೈಸ್ತ ಸನ್ಯಾಸಿನಿ ಸೆಬಾ ಅವರಿಗೆ ತಲೆವಸ್ತ್ರ ಮತ್ತು ಕ್ರೈಸ್ತನ ಶಿಲುಬೆಯ ಲೋಲಕವನ್ನು ಪರೀಕ್ಷೆ ಮುಗಿಯುವವರೆಗೆ ತೆಗೆದಿಡುವಂತೆ ಶಾಲೆ ಆಡಳಿತ ಮಂಡಳಿ ಸೂಚಿಸಿತ್ತು. ಆದರೆ, ಅವರು ಒಪ್ಪದಿದ್ದಾಗ ಪರೀಕ್ಷೆಗೆ ಅವಕಾಶ ನಿರಾಕರಿಸಲಾಯಿತು. `ನನ್ನ ಸಾಂಪ್ರದಾಯಿಕ ಉಡುಗೆ ಮತ್ತು ಲೋಲಕವನ್ನು ತೆಗೆಯಲು ಸಾಧ್ಯವಿಲ್ಲ ಎಂದು ಶಾಲೆ ಮುಖ್ಯಸ್ಥರಿಗೆ ಮನವರಿಕೆ ಮಾಡಲು ಪ್ರಯತ್ನಿಸಿದೆ.

ಆದರೆ, ಅವರು ದಿನದ ಮಟ್ಟಿಗೆ ತೆಗೆದಿರಿಸಿದರೆ ಏನೂ ಆಗದು ಎಂದರು. ಸುಪ್ರೀಂ ಆದೇಶದಲ್ಲೂ ಇದನ್ನು ಉಲ್ಲೇಖಿಸಲಾಗಿದೆ ಎಂದು ನನ್ನ ಬಾಯಿ ಮುಚ್ಚಿಸಿದರು. ನಿಯಮಾವಳಿಗಳನ್ನು ನನ್ನ ಮೇಲೆ ಬಲವಂತವಾಗಿ ಹೇರಲು ಪ್ರಯತ್ನಿಸಿದರು,' ಎಂದು ಸನ್ಯಾಸಿನಿ ಹೇಳಿದ್ದಾರೆ. ಘಟನೆಯನ್ನು ಕ್ಯಾಥೋಲಿಕ್ ಬಿಷಪ್ ಪರಿಷತ್ತು ಖಂಡಿಸಿದೆ.

ಅಖಿಲ ಭಾರತೀಯ ವೈದ್ಯಕೀಯ ಪೂರ್ವ ಪರೀಕ್ಷೆಗೆ (ಎಐಪಿಎಂಟಿ) ಬುರ್ಖಾ ಧರಿಸಿ ಬರುವ ಮುಸ್ಲಿಂ ಯುವತಿಯರಿಗೆ ಅವಕಾಶ ಕಲ್ಪಿಸಿಕೊಡ ಬೇಕೆಂಬ ಮುಸ್ಲಿಂ ಸಂಘಟನೆಗಳ ಮನವಿಯ ವಿಚಾರಣೆ ಕೈಗೆತ್ತಿಕೊಳ್ಳಲು ಶುಕ್ರವಾರ ನಿರಾಕರಿಸಿದ್ದ ಸುಪ್ರೀಂ ಕೋರ್ಟ್ ` ಸಾಂಪ್ರದಾಯಿಕ ವಸ್ತ್ರಗಳನ್ನು ಒಂದು ದಿನದ ಮಟ್ಟಿಗೆ ಧರಿಸದೇ ಇದ್ದರೆ ನಂಬುಗೆಗಳಿಗೆ ಧಕ್ಕೆಯಾಗದು' ಎಂಬ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಈ ಹಿನ್ನೆಲೆಯಲ್ಲಿ ಶಾಲೆ ಆಡಳಿತ ಮಂಡಳಿ ಈ ಕ್ರಮಕ್ಕೆ ಮುಂದಾಗಿತ್ತು. ಕಠಿಣ ನಿಯಮ: ಕಳೆದ ಬಾರಿ ಭಾರಿ ಅಕ್ರಮ ನಡೆದಿದ್ದ ಹಿನ್ನೆಲೆಯಲ್ಲಿ ಈ ಬಾರಿ ಸಿಬಿಎಸ್‍ಸಿಯು ಕಠಿಣ ನಿಲುವುಗಳನ್ನು ಕೈಗೊಂಡಿತ್ತು. ಮೊಬೈಲ್,  ಕ್ಯಾಲ್ಕ್ಯುಲೇಟರ್, ಗಡಿಯಾರ, ಜ್ಯಾಮಿಟ್ರಿ ಬಾಕ್ಸ್, ಪೆನ್ಸಿಲ್ ಬಾಕ್ಸ್, ಕೈಚೀಲ, ಕೈಗವಸು ಸೇರಿದಂತೆ ಹೆಚ್ಚುವರಿ ವಸ್ತ್ರ ತಾರದಂತೆ ಕಟ್ಟಪ್ಪಣೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಅನೇಕ ಕಡೆ ಹೆಣ್ಣುಮಕ್ಕಳು ಹಾಕಿಕೊಂಡು ಬಂದಿದ್ದ ಮೂಗುತಿಯನ್ನೂ ತೆಗೆದಿಟ್ಟು ಪರೀಕ್ಷೆ ಕೇಂದ್ರಕ್ಕೆ ತೆರಳುವಂತೆ ಪರೀಕ್ಷೆ ಮೇಲ್ವಿಚಾರಕರು ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com