ಕೇಂದ್ರ ಸರ್ಕಾರದ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಯೋಜನೆಗೆ ಕಲಾಂ ಹೆಸರು
ನವದೆಹಲಿ: ಕೇಂದ್ರ ಸರ್ಕಾರ ತನ್ನ ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಯೋಜನೆಗೆ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ಅವರ ಹೆಸರಿಡಲು ಚಿಂತನೆ ನಡೆಸಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಮಾಹಿತಿ ನೀಡಿದ್ದು ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಯೋಜನೆಗೆ ಅಬ್ದುಲ್ ಕಲಾಮ್ ಅವರ ಹೆಸರಿನಲ್ಲಿ ಮರುನಾಮಕರಣ ಮಾಡಲು ಚಿಂತಿಸಿದ್ದೇವೆ ಎಂದು ಹೇಳಿದ್ದಾರೆ.
ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ವಿಜ್ಞಾನ ಹಾಗೂ ಗಣಿತವನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸುವ ಈ ಯೋಜನೆಗೆ ಈ ತಿಂಗಳ ಪ್ರಾರಂಭದಲ್ಲಿ ಅಬ್ದುಲ್ ಕಲಾಂ ಅವರೇ ಚಾಲನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಲಾಂ ಅವರ ಹೆಸರಿನಲ್ಲಿ ಯೋಜನೆ ಗುರುತಿಸಿಕೊಳ್ಳಬೇಕು ಎಂದು ಸ್ಮೃತಿ ಇರಾನಿ ಭಿಪ್ರಾಯಪಟ್ಟಿದ್ದಾರೆ.
ಯೋಜನೆಗೆ ಪ್ರಮುಖ ವ್ಯಕ್ತಿಗಳ ಹೆಸರನ್ನು ನೀಡುವುದಕ್ಕೆ ಕೆಲವು ಪ್ರಕ್ರಿಯೆಗಳಿದ್ದು, ಅದನ್ನು ಶೀಘ್ರವೇ ಪ್ರಾರಂಭಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ನಿರಂತರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಉಪನ್ಯಾಸ ನೀಡುತ್ತಿದ್ದ ಅಬ್ದುಲ್ ಕಲಾಮ್, ಶಿಲ್ಲಾಂಗ್ ನ ಐಐಎಂ ನಲ್ಲಿ ವಿದ್ಯಾರ್ಥಿ ನೀಡುತ್ತಿದ್ದಾಗ ಕುಸಿದುಬಿದ್ದಿದ್ದರು. ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಾಷ್ಟ್ರೀಯ ಆವಿಷ್ಕಾರ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ್ದ ಅಬ್ದುಲ್ ಕಲಾಮ್ ಉನ್ನತ ಗುರಿ, ಜ್ಞಾನದ ಅನ್ವೇಷಣೆ, ಕಠಿಣ ಪರಿಶ್ರಮವನ್ನು ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದರು.
ರಾಷ್ಟ್ರೀಯ ಆವಿಷ್ಕಾರ ಅಭಿಯಾನದಡಿಯಲ್ಲಿ ಐಐಟಿ, ಐಐಎಂ, ಐ.ಐ.ಎಸ್.ಇ.ಆರ್.ಎಸ್ ನಂತಹ ಸಂಸ್ಥೆಗಳು ಸರ್ಕಾರಿ ಶಾಲೆಗಳಲ್ಲಿ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಮಾರ್ಗದರ್ಶನ ನೀಡಲಿವೆ. ಕೇಂದ್ರ ಸರ್ಕಾರದ ನಿರ್ಧಾರ ಶೀಘ್ರವೇ ಜಾರಿಯಾದರೆ ಈ ಯೋಜನೆ ಅಬ್ದುಲ್ ಕಲಾಂ ಅವರ ಹೆಸರಿನಲ್ಲಿ ಗುರುತಿಸಿಕೊಳ್ಳಲಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ