
ನವದೆಹಲಿ: ಪಂಜಾಬ್‍ನ ದೀನಾನಗರ ದಾಳಿಯ ಮೂವರು ಲಷ್ಕರ್ ಇ ತೊಯ್ಬಾ ಉಗ್ರರು ಗುರುದಾಸ್‍ಪುರ ಜಿಲ್ಲೆಯ ವಿವಿಧೆಡೆ ಜನನಿಬಿಡ ಪ್ರದೇಶಗಳ ಮೇಲೆ ದಾಳಿಗೆ ಸಜ್ಜಾಗಿ ಬಂದಿದ್ದರು!
ಉಗ್ರರ ಬಳಿ ಪತ್ತೆಯಾಗಿ ರುವ ಎರಡು ಜಿಪಿಎಸ್ ಪರಿಕರಗಳು ಈ ಆಘಾತಕಾರಿ ಮಾಹಿತಿ ನೀಡಿದ್ದು, ಪಾಕ್‍ನಿಂದ ಭಾರತದ ಗಡಿಯೊಳಕ್ಕೆ ಕಾಲಿಟ್ಟ ಬಳಿಕ ತಾವು ದಾಳಿ ನಡೆಸಬೇಕಿರುವ ಸ್ಥಳಗಳನ್ನು ಜಿಪಿಎಸ್ ಪ್ರೊಗ್ರಾಮಿಂಗ್ ಮಾಡಿದ್ದರು ಎಂದು ಘಟನೆಯ ತನಿಖೆ ಚುರುಕುಗೊಳಿಸಿರುವ ಅಧಿಕಾರಿಗಳು ಹೇಳಿದ್ದಾರೆ. ದುಷ್ಕರ್ಮಿಗಳು ರಾವಿ ನದಿಯನ್ನು ಬಳಸಿ ಪಂಜಾಬ್‍ಗೆ ಕಾಲಿಟ್ಟಿರುವ ಶಂಕೆ ವ್ಯಕ್ತಪಡಿಸಿರುವ ತನಿಖಾಧಿಕಾರಿಗಳು, ಗಡಿ ಭಾಗದಲ್ಲಿ ಹರಿವ ರಾವಿ ನದಿ ಪಾಕ್‍ನೊಳಕ್ಕೆ ಸಾಗುವ ಮುನ್ನ ಮೂರು ಕಡಿದಾದ ಹರಿವು ಹೊಂದಿದೆ. ಈ ಪ್ರದೇಶದಿಂದಲೇ ಉಗ್ರರು ನದಿ ಬಳಸಿ ಒಳನುಸುಳಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಬಮಿಯಾಲ್ ಬಳಿ ನದಿ ದಾಟಿದ ಉಗ್ರರು, ತಲ್‍ವಾಂಡಿ-ಅಮೃತಸರ ರೈಲು ಮಾರ್ಗದಲ್ಲಿ ಬಾಂಬ್ ಇಡುವ ಮುನ್ನ ಸುಮಾರು 15 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದಾರೆ. ಒಂದು ಜಿಪಿಎಸ್ ಪರಿಕರದಲ್ಲಿ ತಲ್‍ವಾಂಡಿ, ಪರಮಾನಂದ ಗ್ರಾಮ, ದೀನಾನಗರ ಜಾಗಗಳನ್ನು ಗುರುತುಮಾಡಲಾಗಿದೆ. ಮತ್ತೊಂದರಲ್ಲಿ ಗುರುದಾಸ್‍ಪುರ್ ಜನವಸತಿ ಪ್ರದೇಶಗಳನ್ನು ಗುರುತು ಮಾಡಲಾಗಿದೆ. ಈ ಮೂಲಕ ಉಗ್ರರು, ತಮ್ಮ ದಾಳಿಗೆ ಜನನಿಬಿಡ ಪ್ರದೇಶಗಳನ್ನೇ ಗುರಿಯಾಗಿಸಿಕೊಂಡಿರುವುದು ದೃಢಪಟ್ಟಿದೆ. ಹೀಗಾಗಿ ಜಿಪಿಎಸ್ ಪರಿಕರಗಳನ್ನು ಫೊರೆನ್ಸಿಕ್ ಪರೀಕ್ಷೆಗೆ ರವಾನಿಸಿವೆ. ದೇವಿಂದರ್ ಪಾಲ್ ಸೆಹಗಲ್, ಅಶ್ವಿನ್‍ಕು ಮಾರ್ ನೇತೃತ್ವದ ಉನ್ನತ ಮಟ್ಟದ ಫೊರೆನ್ಸಿಕ್ ತಜ್ಞರ ತಂಡ ಉಗ್ರರು ಆಶ್ರಯಪಡೆದಿದ್ದ ಪೊಲೀಸ್ ಠಾಣೆಯ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿದ್ದು, ಪರಿಶೀಲನೆ ವೇಳೆ ಉಗ್ರರ ಹಿನ್ನೆಲೆ, ಯಾವ ಕಡೆಯಿಂದ ಆಗಮಿಸಿದ್ದಾರೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.
ಉಗ್ರರು ಅಡಗಿದ್ದ ಸ್ಥಳದಲ್ಲಿ ಚೀನಾದಲ್ಲಿ ತಯಾರಾಗಿರುವ ಒಂಬತ್ತು ಗ್ರೆನೇಡ್‍ಗಳು ಪತ್ತೆಯಾಗಿದ್ದು, ಅವರೆಲ್ಲಾ ಅತ್ಯಾಧುನಿಕ ಶಸ್ತ್ರಾಸ್ತ್ರ ಹೊಂದಿದ್ದರು. ಜೊತೆಗೆ ಗುಂಡುನಿರೋಧಕ ಜಾಕೆಟ್ ಬಳಸಿದ್ದರು ಎಂದು ತಿಳಿಸಿರುವ ಪಂಜಾಬ್ ಪೊಲೀಸ್ ಡಿಜಿ ಸುಮೇದ್‍ಸಿಂಗ್ ಸೈನಿ, ಎಕೆ-47 ಗನ್ ಮತ್ತು ಕೈಬಾಂಬುಗಳನ್ನು ವಶಕ್ಕೆ ಪಡೆದಿರುವುದಾಗಿ ಹೇಳಿದ್ದಾರೆ. ಪಠಾಣ್‍ಕೋಟ್ ಮತ್ತು ಗುರುದಾಸ್ ಪುರ ನಡುವೆ ಇರುವ ದೀನಾನಗರಕ್ಕೆ ಉಗ್ರರು ಜಮ್ಮು ಕಡೆಯಿಂದ ಪ್ರವೇಶಿಸಿರುವ ಸಾಧ್ಯತೆ ಹೆಚ್ಚಿರುವುದರಿಂದ ಈ ನಿಟ್ಟಿನಲ್ಲಿ ತನಿಖೆ ಚುರುಕುಗೊಂಡಿರುವುದಾಗಿ ಮೂಲಗಳು ತಿಳಿಸಿದ್ದು, ಜಮ್ಮು ಮತ್ತು ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಬಿಗಿ ಪಹರೆ ಮುಂದುವರಿಸಲಾಗಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ.
15ರಂದು ಲಷ್ಕರ್ ದಾಳಿ?
ಈ ಬಾರಿಯ ಸ್ವಾತಂತ್ರ್ಯ ದಿನ ವೇಳೆ ಲಷ್ಕರ್ ಉಗ್ರ ಸಂಘಟನೆ ದೆಹಲಿ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಹೀಗೆಂದು ಇಂಟಲಿಜೆನ್ಸ್ ಬ್ಯೂರೋ ಎಚ್ಚರಿಕೆ ನೀಡಿದೆ. ಗುರುದಾಸ್ ಪುರ ಘಟನೆ ಬೆಳವಣಿಗೆ, ಹೊಸ ಎಚ್ಚರಿಕೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಗಸ್ತು ಬಿಗಿಗೊಳಿಸಲಾಗಿದೆ ಆಪರೇಷನ್ ಲಾಲ್ ಕಿಲಾ'' ಎಂಬ ಹೆಸರಲ್ಲಿ ಈ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನುವುದು ಐಬಿ ಅಂದಾಜು.
Advertisement