
ನವದೆಹಲಿ: ಬಾಂಗ್ಲಾದೇಶ ಹಾಗೂ ಮಾಯನ್ಮಾರ್ ಗೆ ''ಕೊಮೆನ್'' ಚಂಡಮಾರುತ ಅಪ್ಪಳಿಸಿದ್ದು, ಪರಿಣಾಮ 33 ಜನರು ಸಾವನ್ನಪ್ಪಿದ್ದು, 6 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.
ಇದರ ಪ್ರಭಾವದಿಂದಾಗಿ 2 ದಿನಗಳಲ್ಲಿ ಪಶ್ಚಿಮ ಬಂಗಾಳ, ಒಡಿಶಾದಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕೊಲ್ಕತ್ತದ ಪೂರ್ವ ಆಗ್ನೇಯ ದಿಕ್ಕಿನಿಂದ 300 ಕಿ.ಮೀ ದೂರದಲ್ಲಿ ರಚನೆಯಾಗಿರುವ ಕೊಮೆನ್, ಬಾಂಗ್ಲಾದೇಶದಲ್ಲಿ ಭಾರಿ ಮಳೆ ಸುರಿಸಿ, ಕ್ರಮೇಣ ಕ್ಷೀಣವಾಗಿ ಪಶ್ಚಿಮ ವಾಯುವ್ಯ ದಿಕ್ಕಿನತ್ತ ಸಾಗಲಿದೆ. ''ಕೆಲ ಪ್ರದೇಶಗಳಲ್ಲಿ ಸಾಧಾರಣ ಮಳೆಯಾಗಲಿದೆ. ಇನ್ನು ಕೆಲ ಪ್ರದೇಶಗಳಲ್ಲಿ ಭಾರಿ ಮತ್ತು ಪ್ರಬಲ ಮಳೆಯಾಗಲಿದೆ. ಪಶ್ಚಿಮ ಬಂಗಾಳದಲ್ಲಿ ಇನ್ನೆರಡು ದಿನಗಳ ಕಾಲ ಭಾರಿ ಮತ್ತು ಅತ್ಯಂತ ಪ್ರಬಲ ಮಳೆಯಾಗುವ ಸಾಧ್ಯತೆಗಳಿವೆ.
ಒಡಿಶಾದ ಕೆಲ ಭಾಗ ಗಳಲ್ಲೂ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ, ಒಡಿಶಾದ 5 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಅಲ್ಲದೆ, ಜಾರ್ಖಂಡ್‍ನಲ್ಲೂ ಚಂಡಮಾರುತದ ಪರಿಣಾಮವಾಗಿ ಮಳೆಯಾಗಲಿದೆ. ಪಶ್ಚಿಮ ಬಂಗಾಳದಲ್ಲಿ 26 ಸಾವಿರ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ'' ಎಂದು ಹವಾಮಾನ ಇಲಾಖೆ ತಿಳಿಸಿದೆ. ಗಂಟೆಗೆ 70 ಕಿ.ಮಿ ವೇಗದಲ್ಲಿ ಸುತ್ತುತ್ತಿರುವ ಚಂಡಮಾರುತದಿಂದಾಗಿ 50-60 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ.
Advertisement