ಸಂಸತ್ ನಲ್ಲಿ ಹಿಂದೂ ಭಯೋತ್ಪಾದನೆ ಗದ್ದಲ

ಹಿಂದೂ ಭಯೋತ್ಪಾದನೆ ಪರಿಭಾಷೆ ಪರಿಚಯಿಸಿದ ಹಿಂದಿನ ಯುಪಿಎ ಸರ್ಕಾರ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದ ಹಾದಿ ತಪ್ಪಿಸಿ ದು ರ್ಬಲಗೊಳಿಸಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್...
ಸಂಸತ್ ಕಲಾಪ
ಸಂಸತ್ ಕಲಾಪ

ನವದೆಹಲಿ: ಹಿಂದೂ ಭಯೋತ್ಪಾದನೆ ಪರಿಭಾಷೆ ಪರಿಚಯಿಸಿದ ಹಿಂದಿನ ಯುಪಿಎ ಸರ್ಕಾರ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟದ  ಹಾದಿ ತಪ್ಪಿಸಿ ದು ರ್ಬಲಗೊಳಿಸಿದೆ ಎಂದು ಗೃಹ  ಸಚಿವ ರಾಜನಾಥ್ ಸಿಂಗ್ ಆರೋಪಿಸಿದ ಹಿನ್ನಲೆಯಲ್ಲಿ ಲೋಕಸಭೆಯಲ್ಲಿ ಕೋಲಾಹಲ ಉಂಟಾಗಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.

ಯುಪಿಎ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ಮಾಡಿದ ಗಹ ಸಚಿವರು, ಭಯೋತ್ಪಾದನೆ ರಾಷ್ಟ್ರ ಎದುರಿಸುತ್ತಿರುವ ಅತಿದೊಡ್ಡ ಸವಾಲು.  ಸಂಸತ್ತಾಗಲಿ, ರಾಷ್ಟವಾಗಲಿ ಈ ವಿಷಯದಲ್ಲಿ ಒಗ್ಗಟ್ಟು  ಬಿಡಬಾರದು ಧೀರ ಸೈನಿಕರು ಭಯೋತ್ಪಾದಕರ ವಿರುದ್ಧ ಹೋರಾಟ ಮಾಡಿ ಅತಿದೊಡ್ಡ ತ್ಯಾಗ ಮಾಡುತ್ತಿದ್ದಾರೆ,  ಮತ್ತೊಂದು ಕಡೆನೀವು (ಪ್ರತಿಪಕ್ಷಗಳು) ಸಂಸತ್ತಿನಲ್ಲಿ ಗದ್ದಲವೆಬ್ಬಿಸಿ ಕಲಾಪಕ್ಕೆ  ಅಡ್ಡಿ ಮಾಡುತ್ತಿದ್ದೀರಿ, ಇದನ್ನು ದೇಶ ಹೇಗೆ ತಾನೆ ಒಪ್ಪಿಕೊಳ್ಳುತ್ತದೆ ಎಂದು ಖಾರವಾಗಿ ಪ್ರಶ್ನಿಸಿದರು.

ಇದರಿಂದ ರೊಚ್ಚಿಗೆದ್ದ ಪ್ರತಿಪಕ್ಷದ ಸದಸ್ಯರು ಮತ್ತಷ್ಟು ಏರು ದನಿಯಲ್ಲಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಅಧಿವೇಶನ ಆರಂಭದಿಂದಲೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್,  ರಾಜಸ್ಥಾನ ಸಿಎಂ ವಸುಂಧರಾರಾಜೇ, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌವಾಣ್ ಅವರ ರಾಜಿನಾಮೆಗೆ ಒತ್ತಾಯಿಸಿ ಕಲಾಪಕ್ಕೆ ಅಡ್ಡಿ ಮಾಡುತ್ತಿರವ ಪ್ರತಿಪಕ್ಷಗಳು ಶುಕ್ರವಾರವೂ  ಕಲಾಪಕ್ಕೆ ಅಡ್ಡಿ ಮಾಡಿದವು. ಗುರುವಾರ ರಾಜ್ಯಸಭೆಯಲ್ಲಿ ಗುರುದಾಸ್‍ಪುರ ಭಯೋತ್ಪಾದನೆ ಕೃತ್ಯದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಗೃಹ ಸಚಿವ ರಾಜ್‍ನಾಥ್ ಸಿಂಗ್, ಶುಕ್ರವಾರ ಲೋಕಸಭೆಯಲ್ಲಿ  ನೀಡಿದರು. ಸದನದಲ್ಲಿ ಗದ್ದಲ, ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಮತ್ತಿತರ ಪ್ರತಿಪಕ್ಷಗಳ ಸದಸ್ಯರು, ಗಹ ಸಚಿವರು ಹೇಳಿಕೆ ನೀಡುವಾಗ ತಮ್ಮ ಸ್ಥಾನಗಳಿಗೆ ಬಂದು ಕುಳಿತು, ಗೃಹ ಸಚಿವರ  ಹೇಳಿಕೆಯನ್ನು ಆಲಿಸಿದರು. ಅವರ ಹೇಳಿಕೆ ಮುಗಿದ ನಂತರ ಪ್ರತಿಪಕ್ಷ ಸದಸ್ಯರು ಮತ್ತೆ ಸದನದ ಬಾವಿಗೆ ತೆರಳಿ ಪ್ರತಿಭಟನೆ ಮುಂದುವರೆಸಿದರು. ಇದರಿಂದ ಕೆರಳಿದ ರಾಜನಾಥ್,  ಭಯೋತ್ಪಾದನೆ ನಿಗ್ರಹಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ವಾಗ್ದಾಳಿ ಮಾಡಿದರು.

1962ರ ಚೀನಾ ಯುದ್ಧದಲ್ಲಿ ಸೋಲಲು ಕಾಂಗ್ರೆಸ್ ಕಾರಣ ಎಂದು ನೇರ ವಾಗ್ದಾಳಿ ಮಾಡಿದ್ದಷ್ಟೆ ಅಲ್ಲದೇ,  ಹವಾಮಾನ ಸಮಾವೇಶ ಮತ್ತು ಶಾಮ್-ಎಲ್-ಷೇಖ್ ವೈಫಲ್ಯಗಳನ್ನು ಪ್ರಸ್ತಾಪಿಸಿ  ಕಾಂಗ್ರೆಸ್ ಸದಸ್ಯರಿಗೆ ಮುಜುಗರವನ್ನುಂಟು ಮಾಡಿದರು.

ಹಾದಿ ತಪ್ಪಿಸಿದ ಚಿದಂಬರಂ
ಈ ಹಂತದಲ್ಲಿ ಕಾಂಗ್ರೆಸ್ ಸದಸ್ಯರು ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಅದರ ನಡುವೆಯೇ ರಾಜನಾಥ್, ಇದೇ ಸದನದಲ್ಲಿ 2013ರಲ್ಲಿ ಅಂದು ಗೃಹ ಸಚಿವರಾಗಿದ್ದ ಚಿದಂಬರಂ  ಅವರು, ತನಿಖೆಯ ಹಾದಿ ತಪ್ಪಿಸಲು ``ಹಿಂದೂ ಭಯೋತ್ಪಾದನೆ'' ಎಂಬ ಪರಿಭಾಷೆ ಪರಿಚಯಿಸಿದರು. ಇದರಿಂದಾಗಿ ಭಯೋತ್ಪಾದನೆ ವಿರುದ್ಧದ ನಮ್ಮ ಹೋರಾಟ ದುರ್ಬಲಗೊಂಡಿತು.

ತತ್ಪರಿಣಾಮ ಪಾಕಿಸ್ತಾನದ ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ ನಮ್ಮ ಗೃಹ ಸಚಿವರನ್ನು ಅಭಿನಂದಿಸಿದ. ಆದರೆ, ನಮ್ಮ ಸರ್ಕಾರ ಇಂತಹ ಲಜ್ಜೆಗೇಡಿ ಪರಿಸ್ಥಿತಿ ಮರುಕಳಿಸಲು ಎಂದಿಗೂ  ಅವಕಾಶ ನೀಡುವುದಿಲ್ಲ ಎಂದರು. ನಿಯಮಾನುಸಾರ ನೋಟಿಸ್ ನೀಡಿದರೆ ನಾವು ಭಯೋತ್ಪಾದನೆ ವಿಷಯದಲ್ಲಿ ಚರ್ಚೆಗೆ ಸಿದ್ಧರಿದ್ದೇವೆ. ನಿಮ್ಮ ಪ್ರಶ್ನೆಗಳಿಗೂ ಉತ್ತರಿಸುತ್ತೇವೆ. ನಮ್ಮ ಸರ್ಕಾರ  ಮತ್ತು ಪ್ರಧಾನಿ ಇಂತಹ ಸವಾಲು ನಿಭಾಯಿಸಲು ಸರ್ವ ಪ್ರಯತ್ನ ಮಾಡುತ್ತಿದ್ದಾರೆ ಎಂದರು. ಆದರೆ, ತಕ್ಷಣ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷದ ಸದಸ್ಯರ ಬೇಡಿಕೆಯನ್ನು ಸ್ಪೀಕರ್  ಮನ್ನಿಸಲಿಲ್ಲ. ಇದರಿಂದ ಪ್ರತಿಪಕ್ಷಗಳ ಸದಸ್ಯರು ಮತ್ತಷ್ಟು ಆಕ್ರೋಶಗೊಂಡರು.

ನಾವು ಸರ್ಕಾರದ ಹೇಳಿಕೆಯನ್ನು ಆಲಿಸಿದ್ದೇವೆ, ನಮಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಕಾಂಗ್ರೆಸ್‍ನ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೆ ಸ್ವೀಕರ್‍ಗೆ ಮನವಿ ಮಾಡಿದರು. ಆದರೂ  ಅವಕಾಶ ನೀಡದ್ದರಿಂದ ಕುಪಿತರಾದ ಖರ್ಗೆ ಗದ್ದಲದ ನಡುವೆಯೇ, ಇದು ಅತ್ಯಂತ ದುರದೃಷ್ಟ ನಿಮ್ಮ (ಸ್ವೀಕರ್) ಮೇಲಿನ ಗೌರವವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದರು. ಕೊನೆಗೆ ಕಲಾಪವನ್ನು  ಸೋಮವಾರಕ್ಕೆ ಮುಂದೂಡಿದರು. ಬೆಳಗ್ಗೆ ಪ್ರಶ್ನೋತರ ಕಲಾಪ ಆಂರಂಭವಾಗುತ್ತಿದ್ದಂತೆ ಪ್ರತಿಪಕ್ಷಗಳು ಪ್ರತಿಭಟನೆ ಮುಂದುವರೆಸಿದವು. ಸ್ಪೀಕರ್ ಸುಮಿತ್ರಾ ಮಹಾಜನ್ ಪದೇ ಪದೆ ಮನವಿ  ಮಾಡಿದರೂ ಪ್ರತಿಭಟನೆ ನಿಲ್ಲಿಸಲಿಲ್ಲ. ಭಿತ್ತಿಪತ್ರ ಪ್ರದರ್ಶಿಸದಂತೆಯೂ ನೀಡಿದ ಸೂಚನೆಯನ್ನು ಸದಸ್ಯರು ಪಾಲಿಸಲಿಲ್ಲ. ನೀವೆಷ್ಟೂ ಕೂಗಿದರೂ ನಾನು ಇಂದು ಕಲಾಪ ಮುಂದೂಡುವುದಿಲ್ಲ  ಎಂದು ದೃಢವಾಗಿ ಹೇಳಿದ ಸ್ವೀಕರ್, ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ಮುಗಿಸಿದರು. ನಂತರ ವಿವಿಧ ವರದಿಗಳ ಮಂಡನೆಯೂ ಗದ್ದಲದ ನಡುವೆಯೇ ಆಯಿತು. ಮೇಲ್ಮನೆಯಲ್ಲೂ  ಸುಷ್ಮಾ, ರಾಜೇ, ಚೌಹಾಣ್ ರಾಜಿ ನಾಮೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿ ಮಾಡಿದವು.

ಆ.3ಕ್ಕೆ ಸಭೆ: ಈ ಮಧ್ಯೆ ಸಂಸತ್ತಿನ ಸುಗಮ ಕಲಾಪಕ್ಕೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಿರುವ ಸರ್ಕಾರ ಸೋಮವಾರ ಸರ್ವ ಪಕ್ಷಗಳ ಸಭೆ ಕರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com