
ಮಾಹೌ: ದೇಶದಲ್ಲಿ ದಲಿತರು ಸೇರಿದಂತೆ ಕೆಲ ವರ್ಗಗಳ ಜನರನ್ನು ಅವರ ಹಕ್ಕುಗಳಿಂದ ದೂರ ಇಟ್ಟಿರುವುದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಾತಿ ನಿರ್ಮೂಲನಾ ಕನಸು ಇನ್ನೂ ಅಪೂರ್ಣವಾಗಿದ್ದು, ಅದು ಈಡೇರಲು ಸಾಧ್ಯವಾಗಿಲ್ಲ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮೌಹಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಅಂಬೇಡ್ಕರ್ ಅವರ ಆಸೆಯನ್ನು ಈಡೇರಿಸುವುದು ನನ್ನ ಕರ್ತವ್ಯ ನಿಮ್ಮ ಹಾಗೂ ಎಲ್ಲರ ಕರ್ತವ್ಯ ಎಂದು ಹೇಳಿದರು.
ಇನ್ನು ಮೋದಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ರಾಹುಲ್ , ಮದ್ರಾಸ್ ಐಐಟಿಯಲ್ಲಿ ವಿದ್ಯಾರ್ಥಿ ಸಂಘಟನೆಗೆ ನಿಷೇಧ ಹೇರಿದ್ದು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದೆ. ಆ ಸಂಘಟನೆಯಲ್ಲಿ ದಲಿತರು ಪ್ರಮುಖ ಸದಸ್ಯರಾಗಿದ್ದರು ಹೀಗಾಗಿ ಆ ಸಂಘಟನೆಗೆ ನಿಷೇಧ ಹೇರಲಾಗಿದೆ ಎಂದು ದೂರಿದರು.
ಸಂವಿಧಾನ ರಚನೆಯಾಗಿ ಹಲವು ವರ್ಷಗಳೇ ಕಳೆದಿದ್ದರೂ ಇನ್ನೂ ದೇಶದಲ್ಲಿ ಜಾತಿ ವ್ಯವಸ್ಥೆ ಕಂಡುಬರುತ್ತಿರುವುದು ವಿಷಾಧನೀಯ ಎಂದರು.
Advertisement