ಚುನಾವಣೆಗೆ ಶಾಯಿ ಜೊತೆಯಲ್ಲಿ ಬ್ರಷ್ ಕೂಡ ಕಳಿಸಲಿರುವ ಮೈಸೂರು ಪೇಂಟ್ಸ್

ದೇಶದಲ್ಲಿ ಮತದಾರರ ತೋರುಬೆರಳಿಗೆ ಅಂಟಿಸುವ ಶಾಯಿ ಕಲೆ ಇನ್ನು ಮುಂದೆ ಇನ್ನಷ್ಟು ದೊಡ್ಡದಾಗಲಿದೆ.ಕಳೆದ...
ಮತದಾನ  ಗುರುತು
ಮತದಾನ ಗುರುತು

ನವದೆಹಲಿ: ದೇಶದಲ್ಲಿ ಮತದಾರರ ತೋರುಬೆರಳಿಗೆ ಅಂಟಿಸುವ ಶಾಯಿ ಕಲೆ ಇನ್ನು ಮುಂದೆ ಇನ್ನಷ್ಟು ದೊಡ್ಡದಾಗಲಿದೆ.ಕಳೆದ 53ವರ್ಷಗಳಿಂದ ಶಾಯಿ ಒದಗಿಸುತ್ತಿರುವ ಕರ್ನಾಟಕದ ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್‍ಗೆ ಶಾಯಿಯ ಜೊತೆಯಲ್ಲಿ ಬ್ರಷ್ ಕೂಡಾ ಒದಗಿಸಲು ಚುನಾವಣಾ ಆಯೋಗ ಕೇಳಿದ್ದು, `ಕಡ್ಡಿ ಇತ್ಯಾದಿಗಳಿಂದ ಇನ್ನುಮುಂದೆ ಗುರುತು ಹಾಕುವಂತಿಲ್ಲ.
ಅದೇ ಬ್ರಷ್‍ನಿಂದಲೇ ಗುರುತುಮಾಡಬೇಕು' ಎಂದು ಆದೇಶ ಹೊರಡಿಸಿದೆ. ಈ ಆದೇಶ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಕ್ಷಣವೇ ಜಾರಿಗೆ ಬರಲಿದೆ. ಬೆಂಕಿಕಡ್ಡಿ, ಪೊರಕೆಕಡ್ಡಿ ಮುಂತಾದುವು ಗಳಿಂದ ಬೆರಳಿಗೆ ಹಚ್ಚುತ್ತಿದ್ದ ಶಾಯಿಯನ್ನು ಸಲೀಸಾಗಿ ಅಳಿಸಿಕೊಂಡು, ನಕಲಿ ಮತದಾನ ಮಾಡುತ್ತಿದ್ದವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಇದನ್ನು ಗಮನಿಸಿರುವ ಆಯೋಗ ಈ ಕ್ರಮಕ್ಕೆ ಮುಂದಾಗಿದೆ. ಎಲ್ಲಾ ಜಿಲ್ಲೆಗಳ ಚುನಾವಣಾಧಿಕಾರಿಗಳಿಗೆ ಹೊಸ ಅಧಿಸೂಚನೆಯ ಪ್ರತಿ ಕಳಿಸಲಾಗಿದ್ದು ``ಶಾಯಿಯನ್ನು ಮತದಾರರ ಎಡಗೈ ತೋರುಬೆರಳಿನ ಉಗುರಿನ ಮೇಲ್ತುದಿ ಯಿಂದ ಬೆರಳಿನ ಮೊದಲ ಕೀಲಿನವರೆಗೆ ಬ್ರಷ್‍ನಲ್ಲೇ ಬಳಿಯಬೇಕು'' ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ. ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಲಿಮಿಟೆಡ್ 1962ರಿಂದ ಎಲ್ಲ ಚುನಾವಣೆಗೂ ಅಧಿಕೃತ ಶಾಯಿ ಸರಬರಾಜುದಾರರಾಗಿದ್ದು, ಇದು ಕರ್ನಾಟಕ ಸರ್ಕಾರದ ಸ್ವಾಮ್ಯಕ್ಕೊಳಪಟ್ಟಿದೆ. ಹಲವು ವಿದೇಶಿ ಚುನಾವಣೆಗಳಿಗೂ ಇಲ್ಲಿಂದಲೇ ಶಾಯಿ ಕಳಿಸಲಾಗುತ್ತಿದೆ ಎಂಬುದು ಗಮನಾರ್ಹ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com