
ಜಮ್ಮು: ಖಲಿಸ್ತಾನಿ ಉಗ್ರಗಾಮಿ ನಾಯಕ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆ ಅವರ ಫೋಸ್ಟರ್ ತೆಗೆದುಹಾಕಿದ್ದನ್ನು ವಿರೋಧಿ ಸಿಖ್ ಯುವಕರು ನಡೆಸುತ್ತಿರುವ ಪ್ರತಿಭಟನೆ ಶುಕ್ರವಾರ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜಮ್ಮುವಿನಲ್ಲಿ ಉದ್ವೀಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಷೇಧಾಜ್ಞೆಯ ನಡುವೆಯೂ ಜಮ್ಮು ಪಠಾಣ್ ಕೋಟ್ ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿ ಸಿಖ್ ಯುವಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಹಿರಿಯ ಅಧಿಕಾರಿಗಳ ನಿರ್ದೇಶನದ ಮೇರೆಗೆ ಜಮ್ಮುವಿನಲ್ಲಿ ಸೆಕ್ಷನ್ ೧೪೪ ಜಾರಿಗೊಳಿಸಲಾಗಿದೆ. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ಶನಿವಾರದವರೆಗೆ ಜಮ್ಮುವಿನ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ನಿನ್ನೆ ಪ್ರತಿಭಟನೆ ವೇಳೆ ಪೊಲೀಸ್ ಹಾಗೂ ಸಿಖ್ ಯುವಕರ ಗುಂಪಿನ ಮಧ್ಯ ನಡೆದ ಘರ್ಷಣೆಯಲ್ಲಿ ಓರ್ವ ಯುವಕ ಮೃತಪಟ್ಟು, ಇಬ್ಬರು ಪೊಲೀಸರು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದರು.
ಉಗ್ರಗಾಮಿ ಜರ್ನೈಲ್ ಸಿಂಗ್ ಭಿಂದ್ರನ್ ವಾಲೆಯ ಫೋಸ್ಟರ್ ಅನ್ನು ಕಿತ್ತುಹಾಕಿದ್ದಕ್ಕೆ ಆಕ್ರೋಶಗೊಂಡ ಸಿಖ್ ಸಮುದಾಯದ ಯುವಕರು ದೊಣ್ಣೆ, ಚೂರಿ(ಕಿರ್ಪಾಣ್) ಹಿಡಿದುಕೊಂಡು ಪ್ರತಿಭಟನೆಗೆ ಇಳಿದಿದ್ದರು. ಇದು ಹಿಂಸಾಚಾರಕ್ಕೆ ತಿರುಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಕೆಲವು ಯುವಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement