
ವಿಜಯವಾಡ: ವಿಭಜಿತ ಆಂಧ್ರ ಪ್ರದೇಶ ರಾಜ್ಯದ ನೂತನ ರಾಜಧಾನಿಯಾಗಿ ಆಯ್ಕೆಯಾಗಿರುವ ಅಮರಾತಿ ನಿರ್ಮಾಣಕ್ಕೆ ಶನಿವಾರ ಆಂಧ್ರ ಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಭೂಮಿ ಪೂಜೆ ನೆರವೇರಿಸಿದರು.
ಗುಂಟೂರು ಜಿಲ್ಲೆಯಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಮಂಡದಮ್ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ಅವರ ಪತ್ನಿ ಭುವನೇಶ್ವರಿ ಹಾಗೂ ಅವರ ಪುತ್ರ ಲೋಕೇಶ್ ಅವರು ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ ಸುಮಾರು 8.49ರ ಮುಹೂರ್ತದಲ್ಲಿ ಚಂದ್ರಬಾಬು ನಾಯ್ಡು ಅವರು ನೂತನ ರಾಜಧಾನಿ ಅಮರಾವತಿಗೆ ಭೂಮಿ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪ್ರಮುಖ ಕೇಂದ್ರ ಸಚಿವರು, ರಾಜ್ಯ ಸಚಿವರು ಮತ್ತು ಶಾಸಕರು ಸೇರಿದಂತೆ ಆಂಧ್ರ ಪ್ರದೇಶದ ಕೆಲ ಹಿರಿಯ ಅಧಿಕಾರಿಗಳು ಸೇರಿದಂತೆ ತೆಲುಗು ದೇಶಂ ಪಕ್ಷದ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, "ಈ ದಿನ ಆಂಧ್ರ ಪ್ರದೇಶದ ಇತಿಹಾಸದಲ್ಲಿ ಐತಿಹಾಸಿಕ ದಿನವಾಗಿದೆ. ದೇಶದ ಇತಿಹಾಸದಲ್ಲಿಯೇ ಪ್ರಮುಖ ನಗರವೊಂದು ಜನ್ಮ ತಳೆಯುತ್ತಿದ್ದು, ಭವಿಷ್ಯದಲ್ಲಿ ದೇಶದ ವಾಣಿಜ್ಯ ರಾಜಧಾನಿಯಾಗಲಿದೆ" ಎಂದು ಹೇಳಿದರು. ಅಲ್ಲದೆ "5 ಕೋಟಿ ತೆಲುಗು ಭಾಷಿಕರ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಲಿದೆ. ಭವಿಷ್ದ ರಾಜಧಾನಿ ದೇಶದ ಪ್ರವಾಸೋಧ್ಯಮ ಕೇಂದ್ರವಾಗಿರಲಿದ್ದು, ಉದ್ಯೋಗಾವಕಾಶದ ಕೇಂದ್ರಬಿಂದುವಾಗಿರಲಿದೆ ಎಂದು ಹೇಳಿದರು. ಒಟ್ಟಾರೆ ವಿಭಜಿತ ಆಂಧ್ರ ಪ್ರದೇಶದ ನೂತನ ರಾಜಧಾನಿ ನಿರ್ಮಾಣಕ್ಕೆ ಇಂದು ಅಧಿಕೃತವಾಗಿ ಶಂಕುಸ್ಥಾಪನೆ ನೆರವೇರಿದೆ.
Advertisement