ಮ್ಯಾಗಿ ಮಂಡಿಯೂರುವಂತೆ ಮಾಡಿದ್ದು ಈ ಫುಡ್ ಇನ್ಸ್‌ಪೆಕ್ಟರ್

ಒಂದೆರಡು ವಾರಗಳ ಹಿಂದೆ ಉತ್ತರಪ್ರದೇಶದಲ್ಲಿನ ಒಬ್ಬ ಸಾಧಾರಣ ಫುಡ್ ಸೇಫ್ಟಿ ಆಫೀಸರ್ ಆಗಿದ್ದವರು ಸಂಜಯ್ ಸಿಂಗ್. ಈಗ ಸಂಜಯ್ ಸಿಂಗ್...
ಸಂಜಯ್ ಸಿಂಗ್
ಸಂಜಯ್ ಸಿಂಗ್

ಲಖನೌ: ಒಂದೆರಡು ವಾರಗಳ ಹಿಂದೆ ಉತ್ತರಪ್ರದೇಶದಲ್ಲಿನ ಒಬ್ಬ ಸಾಧಾರಣ ಫುಡ್ ಸೇಫ್ಟಿ ಆಫೀಸರ್ ಆಗಿದ್ದವರು ಸಂಜಯ್ ಸಿಂಗ್. ಈಗ ಸಂಜಯ್ ಸಿಂಗ್ ಯಾರೆಂಬುದು ಜಗತ್ತಿಗೇ ಗೊತ್ತಾಗಿದೆ. ಅದೂ ಮ್ಯಾಗಿಗೆ ಹೇರಲಾಗಿರುವ ನಿಷೇಧದಿಂದ. ಕಥೆಯಲ್ಲಿ ಟ್ವಿಸ್ಟ್ ಬಂದಿದ್ದು ಹೀಗೆ.

ಭಾರತವನ್ನೇ ಖರೀದಿಸುವಷ್ಟು ಶಕ್ತಿಯುಳ್ಳ ನೆಸ್ಲೇ ಎಂಬ ಕಂಪನಿಯನ್ನು ಮಂಡಿಯೂರುವಂತೆ ಮಾಡಿದ ಕೀರ್ತಿ ಸಂಜಯ್ ಸಿಂಗ್ ದ್ದು. ಸಂಜಯ್ ಸಿಂಗ್ ಒಂದು ವರ್ಷದ ಹಿಂದೆ ನಡೆಸಿದ ಪರಿಶೋಧನೆಯ ಫಲವಾಗಿ  1300 ಕೋಟಿ  ವ್ಯವಹಾರ ಮಾಡುತ್ತಿದ್ದ ಮ್ಯಾಗಿ ನೂಡಲ್ಸ್‌ಗೆ ಭಾರತ ನಿಷೇಧ ಹೇರಿದ್ದು. ಹಳಸಿದ ಆಹಾರವಸ್ತುಗಳನ್ನು ಮಾರುವವರ ವಿರುದ್ಧ ಕೇಸು ದಾಖಲಿಸಲು ಹಿಂದೇಟು ಹಾಕುವ ಅಧಿಕಾರಿಗಳ ನಡುವೆ ಸಂಜಯ್ ಸಿಂಗ್ ಮ್ಯಾಗಿಯನ್ನು ಬೆನ್ನತ್ತಿ ಹೊರಟಿದ್ದು. ಹಲವಾರು ಬಾರಿ ಪರೀಕ್ಷೆ ಮಾಡಿ ಅದರ ಆಧಾರದ ಮೇಲೆ ಸಂಜಯ್ ಸಿಂಗ್ ಮ್ಯಾಗಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗಿಸಿದ್ದರು.

ಕಳೆದ ವರ್ಷ ಮಾರ್ಚ್ 10ರಂದು ಉತ್ತರಪ್ರದೇಶದ ಬಾರಾಬಂಕಿನಲ್ಲಿರುವ ಒಂದು ಅಂಗಡಿಯಿಂದ ಒಂದು ಪ್ಯಾಕೆಟ್ ಮ್ಯಾಗಿ ಖರೀದಿಸಿ  ಸಂಜಯ್ ಸಿಂಗ್ ಪರೀಕ್ಷೆಗೆ ಕಳುಹಿಸಿದ್ದರು.  ಆದರೆ ಖರಘ್‌ಪುರ್ ಸರ್ಕಾರಿ ಲ್ಯಾಬ್ ನಿಂದ ಸಿಕ್ಕ ರಿಪೋರ್ಟ್ ನೋಡಿ ಸಂಜಯ್ ಸಿಂಗ್‌ಗೆ ಗಾಬರಿಯಾತ್ತು. ಆ ಪ್ಯಾಕೆಟ್‌ನಲ್ಲಿ ಸೀಸ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮೊನೋಸೋಡಿಯಂ ಗ್ಲುಟಮೇಟ್ ಪತ್ತೆಯಾಗಿತ್ತು . ಮೊದಲಿಗೆ ಸಂಜಯ್ ಸಿಂಗ್‌ಗೆ ವರದಿಯನ್ನು ನಂಬಲು ಸಾಧ್ಯವಾಗಲಿಲ್ಲ. ಮ್ಯಾಗಿಯಂತ ಜನಪ್ರಿಯ ಆಹಾರದಲ್ಲಿ ಇಂಥ ಅಪಾಯಕಾರೀ ವಸ್ತುಗಳು ಇವೆಯೇ? ಎಂಬ ಪ್ರಶ್ನೆ ಕಾಡತೊಡಗಿತು. ಕೂಡಲೇ ಇವರು ತಮ್ಮ ಮೇಲಾಧಿಕಾರಿ ವಿ.ಕೆ ಪಾಂಡೆಯವರಿಗೆ ವಿಷಯ ತಿಳಿಸಿದರು. ಹೆಚ್ಚಿನ ವಿಷಯಗಳನ್ನು ಸಂಗ್ರಹಿಸುವಂತೆ ಪಾಂಡೆ, ಸಂಜಯ್ ಸಿಂಗ್‌ಗೆ ಸೂಚಿಸಿದರು.

ಮ್ಯಾಗಿಯಲ್ಲಿನ ವಿಷಾಂಶಗಳು ಪತ್ತೆಯಾಗಿರುವ ಬಗ್ಗೆ ನೆಸ್ಲೇ ಕಂಪನಿಗೆ ತಿಳಿಸಿದರೂ, ಅದನ್ನು ಒಪ್ಪಲು ಅವರು ತಯಾರಿರಲಿಲ್ಲ. ಸೆಂಟ್ರಲ್ ಲ್ಯಾಬ್ ನಲ್ಲಿ ಪರೀಕ್ಷೆಗೊಳಪಡಿಸಿ ಎಂಬುದಾಗಿತ್ತು ನೆಸ್ಲೆಯವರ ಉತ್ತರ. ಹೀಗಿರುವಾಗ ಬೇರೊಂದು ಅಂಗಡಿಯಿಂದ ಖರೀದಿಸಿ ಮ್ಯಾಗಿಯನ್ನು ಕೊಲ್ಕತ್ತಾದಲ್ಲಿರುವ ಸೆಂಟ್ರಲ್ ಫುಡ್ ಲ್ಯಾಬೊರೇಟರಿಗೆ ಕಳುಹಿಸಲಾಯಿತು. ಅದು ಕಳಿಸಿಕೊಟ್ಟ ವರದಿಯಲ್ಲಿಯೂ ವ್ಯತ್ಯಾಸವೇನೋ ಕಂಡು ಬರಲಿಲ್ಲ.
ಈಗ ನೆಸ್ಲೆಯನ್ನು ಮಂಡಿಯೂರುವಂತೆ ಮಾಡಲೇ ಬೇಕೆಂಬುದಾಗಿತ್ತು ಸಂಜಯ್ ಸಿಂಗ್‌ನ ಹಠ. ಈ ಕೆಲಸದ ನಡುವೆ ಹಲವು ಸಮಸ್ಯೆಗಳೂ ಎದುರಾದವು. ಮೊದಲು ಕೊಲ್ಕತ್ತಕ್ಕೆ ಕಳುಹಿಸಿಕೊಟ್ಟ ಸ್ಯಾಂಪಲ್ ಗಳು ನೇರ ಹೋಗಿದ್ದು ಸಿಮ್ಲಾಗೆ. ಸ್ಯಾಂಪಲ್ ಪರೀಕ್ಷಾ ವರದಿ ಪೋಸ್ಟಾಫೀಸಿನಲ್ಲೇ ಹಲವು ದಿನ ಇದ್ದು, ಆಮೇಲೆ ಸಂಜಯ್ ಸಿಂಗ್ ಕೈ ಸೇರಿತ್ತು.

ತನಗೆ ಸಿಕ್ಕಿದ ಸಾಕ್ಷ್ಯಾಧಾರಗಳನ್ನೆಲ್ಲಾ ಒಗ್ಗೂಡಿಸಿ ಬಾರಾಬಂಕಿನಲ್ಲಿನ ಅಡಿಷನಲ್ ಚೀಫ್ ಜುಡಿಷ್ಯಲ್ ಮೆಜಿಸ್ಟ್ರೇಟ್ ಸಮ್ಮುಖದಲ್ಲಿ ಸಲ್ಲಿಸಿ , ಆಹಾರ ಸುರಕ್ಷಾ ನಿಯಮ 59 (1) ವಿಭಾಗದಲ್ಲಿ ಕೇಸು ದಾಖಲಿಸಲಾಯಿತು.  ಒಂದು ಲಕ್ಷ ರು. ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆ ಲಭಿಸುವ ಕೇಸು ಆಗಿದೆ ಇದು.

ಆದರೆ ಎರಡು ನಿಮಿಷದಲ್ಲಿ ಮ್ಯಾಜಿಕ್ ಮಾಡಬಲ್ಲ ಮ್ಯಾಗಿ ನೂಡಲ್ಸ್‌ನ್ನು ಎರಡೇ ಎರಡು ಪರೀಕ್ಷೆಗಳಿಂದ ಮಂಡಿಯೂರುವಂತೆ ಮಾಡಬಹುದೆಂದು ಸಂಜಯ್ ಗೂ ಗೊತ್ತಿರಲಿಲ್ಲ. ಜನಪ್ರಿಯ ಬ್ರ್ಯಾಂಡ್ ಎಂಬ ಕಾರಣದಿಂದಲೇ ಮ್ಯಾಗಿಯನ್ನು ಆಯ್ಕೆ ಮಾಡಲಾಗಿತ್ತು. ಇದರಲ್ಲಿ ವಿಷಾಂಶಗಳು ಪತ್ತೆಯಾಗಿದ್ದರಿಂದ ಬೇರೆ ನೂಡಲ್ಸ್ ಬ್ರ್ಯಾಂಡ್‌ಗಳಾದ ಐಟಿಸಿಯ ಇಪ್ಪೀ, ಹಿಂದೂಸ್ತಾನ್ ಲಿವರ್‌ನ ನೋರ್, ಗ್ಲಾಸ್ಕೋ ಸ್ಮಿತ್ ಕ್ಲೈಮ್‌ನ ಫೂಡೆಲ್ಸ್  ಎಂಬೀ ನೂಡಲ್ಸ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಒಬ್ಬ ಸರ್ಕಾರಿ ನೌಕರನ ಜವಾಬ್ದಾರಿಯಿಂದಲೇ ಈ ಪರೀಕ್ಷೆಗಳನ್ನು ಕೈಗೊಂಡಿದ್ದು ಅಂತಾರೆ ಸಂಜಯ್ ಸಿಂಗ್.

ಲಖನೌ ನಿವಾಸಿಯಾದ ಸಂಜಯ್ ಸಿಂಗ್ ಲಕ್ನೋ ಕ್ರಿಶ್ಚಿಯನ್ ಕಾಲೇಜಿನಲ್ಲಿ ಆರ್ಗಾನಿಕ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ, ಲಕ್ನೋ ವಿಶ್ವವಿದ್ಯಾಲಯದಿಂದ  ಕೆಮಿಸ್ಟ್ರಿಯಲ್ಲಿ ಡಾಕ್ಟರೇಟ್ ಗಳಿಸಿದ ನಂತರ  1998ರಲ್ಲಿ ಬಾರಾಬಂಕಿನಲ್ಲಿ ಫುಡ್ ಇನ್‌ಸ್ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com