ಭಾರತ-ಬಾಂಗ್ಲಾ ಪಾಸ್-ಪಾಸ್ ಅಷ್ಟೇ ಅಲ್ಲ, ಈಗ ಸಾಥ್-ಸಾಥ್: ಪ್ರಧಾನಿ ಮೋದಿ

ಭಾರತ ಮತ್ತು ಬಾಂಗ್ಲಾದೇಶ ಕೇವಲ ಹತ್ತಿರದಲ್ಲಿ ಮಾತ್ರ ಇತ್ತು. ಇನ್ನು ಮುಂದೆ ಅಭಿವೃದ್ಧಿ ಕಾರ್ಯದಲ್ಲಿ ಜೊತೆಯಾಗಿ ಹೆಜ್ಜೆ ಹಾಕಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ...
ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ

ಢಾಕಾ: ಭಾರತ ಮತ್ತು ಬಾಂಗ್ಲಾದೇಶ ಕೇವಲ ಹತ್ತಿರದಲ್ಲಿ ಮಾತ್ರ ಇತ್ತು. ಇನ್ನು ಮುಂದೆ ಅಭಿವೃದ್ಧಿ ಕಾರ್ಯದಲ್ಲಿ ಜೊತೆಯಾಗಿ ಹೆಜ್ಜೆ ಹಾಕಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಬಾಂಗ್ಲಾ ಪ್ರವಾಸ ಇಂದು ಅಂತ್ಯಗೊಳ್ಳಲ್ಲಿದ್ದು, ಅಂತಿಮ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶದಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಢಾಕಾದಲ್ಲಿ ಮಾತನಾಡಿದರು. ಈ ವೇಳೆ, ವಿಶ್ವದ ಭೂಪಟದಲ್ಲಿ ಭಾರತ ಮತ್ತು ಬಾಂಗ್ಲಾದೇಶ ಹತ್ತಿರದಲ್ಲಿ ಮಾತ್ರ ಇತ್ತು. ಇನ್ನು ಮುಂದೆ ಅಭಿವೃದ್ಧಿ ವಿಚಾರದಲ್ಲಿ ಬಾಂಗ್ಲಾದೇಶ ಮತ್ತು ಭಾರತ ಜೊತೆ-ಜೊತೆಯಾಗಿ ಹೆಜ್ಜೆಹಾಕಲಿವೆ ಎಂದು ಹೇಳಿದರು.

"ಬಾಂಗ್ಲಾದೇಶ ವಿಮೋಚನೆಗಾಗಿ ಇಂದು ಭಾರತೀಯ ಸೈನಿಕರು ಹೋರಾಡಿದ್ದರು. ಅದರ ಪರಿಣಾಮ ಇಂದು ಬಾಂಗ್ಲಾದೇಶದಲ್ಲಿ ಇಂದು ನನಗೆ ಅಭೂತಪೂರ್ವ ಆತ್ಮೀಯ ಸ್ವಾಗತ ದೊರೆತಿದೆ. ನನಗೆ ಸಿಕ್ಕ ಈ ಗೌರವ ಅಂದು ಬಾಂಗ್ಲಾ ವಿಮೋಚನೆಗಾಗಿ ಹೋರಾಡಿದ ಪ್ರತಿಯೊಬ್ಬ ಸೈನಿಕನದ್ದು. ಬಾಂಗ್ಲಾ ಅಭಿವೃದ್ಧಿಗೆ ಭಾರತ ಹೆಮ್ಮೆ ಪಡುತ್ತದೆ. ಭಾರತ ಬಾಂಗ್ಲಾದೇಶ ನಡುವೆ ಒಂದು ಸಾಮಾನ್ಯ ಅಂಶ ಇದ್ದು, ಎರಡೂ ದೇಶದಲ್ಲಿ ಶೇ.65ರಷ್ಟು ಯುವಜನಾಂಗವಿದೆ. ಹೀಗಾಗಿ ಇನ್ನು ಮುಂದೆ ಬಾಂಗ್ಲಾದೇಶದ ಅಭಿವೃದ್ಧಿ ಎಂದೂ ನಿಲ್ಲುವುದಿಲ್ಲ ಎಂದು ಪ್ರಧಾನಿ ಮೋದಿ ಅಭಯ ನೀಡಿದರು.

"ವಿಶ್ವದಲ್ಲಿ ಮೊದಲು ವಿಸ್ತಾರವಾದವಿತ್ತು. ದೇಶಗಳನ್ನು ವಿಸ್ತಾರ ಮಾಡುವ ಮೂಲಕ ಅಭಿವೃದ್ಧಿ ಸಾಧಿಸಬಹುದು ಎಂಬ ತಪ್ಪು ಅಭಿಪ್ರಾಯವಿತ್ತು. ಇದರಿಂದಾಗಿ ದೇಶ-ದೇಶಗಳ ನಡುವೆ ಗಡಿ ವಿವಾದ ಬಿಕಟ್ಟು ಉದ್ಭವಿಸಿತ್ತು. ಆದರೆ ಇಂದು ವಿಸ್ತಾರವಾದ ನಶಿಸಿಹೋಗುತ್ತಿದ್ದು, ಇಧೀಗ ವಿಸ್ತಾರವಾದ ವಿಕಾಸವಾದವಾಗಿ ಮಾರ್ಪಟ್ಟಿದೆ. ರಾಷ್ಟ್ರಗಳ ವಿಸ್ತರಣೆ ಮುಖ್ಯವಲ್ಲ. ದೇಶದ ವಿಕಾಸ ಮುಖ್ಯ ಎಂದು ಎಲ್ಲ ದೇಶಗಳು ಮನಗಂಡಿದೆ. ಭಾರತ-ಬಾಂಗ್ಲಾ ನಡುವೆ ಮಹತ್ವದ ಭೂ ಒಪ್ಪಂದ ನಡೆದಿದ್ದು, ಇದು 2 ರಾಷ್ಟ್ರಗಳ ಜನರನ್ನು ಬೆಸೆಯುವ ಒಪ್ಪಂದವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಅಲ್ಲದೆ, "ಎಲ್ಲಿ ಬುದ್ಧನಿದ್ದಾನೋ ಅಲ್ಲಿ ಯುದ್ಧ ಎನ್ನುವ ಮಾತೇ ಇಲ್ಲ. ಹೀಗಾಗಿ ನಾವೆಲ್ಲರೂ ಒಂದಾಗಿ ಹೊಸ ದಾರಿ ರೂಪಿಸಬೇಕು. ವಿಶ್ವವನ್ನು ಶಾಂತಿಯತ್ತ ಪ್ರಯಾಣಿಸುವಂತೆ ಮಾಡಬೇಕು ಎಂದು ಇದೇ ವೇಳೆ ಪ್ರಧಾನಿ ಮೋದಿ ಕರೆ ಕೊಟ್ಟರು.

ಬಾಂಗ್ಲಾ ಭಾಷೆಯಲ್ಲಿ ವಂದನೆ ಅರ್ಪಿಸಿದ ಮೋದಿ

ಇದೇ ವೇಳೆ ಬಾಂಗ್ಲಾ ಪ್ರವಾಸದ ಅಂತಿಮ ಭಾಷಣ ಮಾಡಿದ ಪ್ರಧಾನಿ ಮೋದಿ ಅವರು, ನನ್ನ 2 ದಿನದ ಪ್ರವಾಸ ಇಂದು ಅಂತ್ಯಗೊಳ್ಳುತ್ತಿದೆ. ಆದರೆ ಇಂದು ನನ್ನ ಪ್ರವಾಸ ಈಗಷ್ಟೇ ಆರಂಭವಾದಂತೆ ಭಾಸವಾಗ್ತಿದೆ. ಇಡೀ ವಿಶ್ವವೇ ಈ ಪ್ರವಾಸವನ್ನು ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಬಾಂಗ್ಲಾ ವಿಮೋಚನೆ ವಿಚಾರವಾಗಿ ಬಾಂಗ್ಲಾದಿಂದ 125 ಕೋಟಿ ಭಾರತೀಯರಿಗೆ ಗೌರವ ಸಲ್ಲಿಕೆಯಾಗಿದೆ. ನನಗೆ ಸಿಕ್ಕ ಸನ್ಮಾನ ಪ್ರತಿಯೊಬ್ಬ ಭಾರತೀಯರಿಗೆ ಸಿಕ್ಕ ದೊಡ್ಡ ಗೌರವ. ನಾವು ಕೇವಲ ಹತ್ತಿರ-ಹತ್ತಿರವಷ್ಟೇ ಅಲ್ಲ. ನಾವು ಜೊತೆ-ಜೊತೆಯಾಗಿಯೂ ಇದ್ದೇವೆ. ಜೊತೆಯಾಗಿ ಅಭಿವೃದ್ಧಿಯೆಡೆಗೆ ಸಾಗೋಣ ಎಂದು ಹೇಳಿದರು.

ಬಾಂಗ್ಲಾ ವಿಮೋಚನಾ ಚಳುವಳಿಯಲ್ಲಿ ಪಾಲ್ಗೊಂಡಿದ್ದೆ: ಪ್ರಧಾನಿ ಮೋದಿ
ಬಾಂಗ್ಲಾದೇಶದೊಂದಿಗೆ ಭಾರತ ದೇಶಕ್ಕೆ ಅವಿನಾಭಾವಸಂಬಂಧವಿದೆ. ವಾಜಪೇಯಿಗೆ ಬಾಂಗ್ಲಾ ಸಲ್ಲಿಸಿದ ವಿಶೇಷ ಗೌರವ ಭಾರತೀಯರಿಗೆ ಸಲ್ಲಿಸಿದ ಗೌರವವಾಗಿದೆ. ಅವರಿಗೆ ಗೌರವ ನೀಡಿದ್ದು ನನಗೆ ನಿಜಕ್ಕೂ ಖುಷಿ ತಂದಿದೆ. ಬಾಂಗ್ಲಾದೊಂದಿಗೆ ನನಗೂ ಆತ್ಮೀಯವಾದ ಸಂಬಂಧವಿದೆ. ನನ್ನ ಯೌವ್ವನದ ದಿನಗಳಿಂದಲೂ ಬಾಂಗ್ಲಾ ಜೊತೆ ನಾನು ನಂಟು ಹೊಂದಿದ್ದೇನೆ.

ಜೀವನದಲ್ಲಿ ಮೊದಲ ಬಾರಿಗೆ ನನ್ನ ಊರನ್ನು ತ್ಯಜಿಸಿದ್ದೆ. ಬಾಂಗ್ಲಾದೇಶಕ್ಕಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಲು ನಾನು ನನ್ನ ಊರನ್ನು ತ್ಯಜಿಸಿದ್ದೆ. ಜನಸಂಘದೊಂದಿಗೆ ಸೇರಿ ಬಾಂಗ್ಲಾ ವಿಮೋಚನೆಗಾಗಿ ಹೋರಾಡಿದ್ದೆ. ಪ್ರಸ್ತುತ ಬಾಂಗ್ಲಾ ಹಲವು ಕಷ್ಟಗಳನ್ನು ಎದುರಿಸುತ್ತಿದೆ. ಆದರೆ ತೀವ್ರ ಕಷ್ಟದ ನಡುವೆಯೂ ಈ ದೇಶ ಅಭಿವೃದ್ಧಿಯೆಡೆಗೆ ಹಾಜ್ಜೆ ಹಾಕುತ್ತಿದೆ. ಬಾಂಗ್ಲಾದೇಶ ಅಭಿವೃದ್ಧಿ ಹೆಜ್ಜೆ ಭಾರತ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com