
ಕೃಷ್ಣಗಿರಿ: ದೆವ್ವ, ಮೂಢನಂಬಿಕೆ, ಅಸೃಶ್ಯತೆ ಎಂಬುದು ನಮ್ಮ ದೇಶದಲ್ಲಿ ನೆಲೆಯೂರಿ ಬಿಟ್ಟಿದೆ. ಯಾರು ಎಷ್ಟೇ ಪ್ರಯತ್ನ ಮಾಡಿದರೂ ಈ ಪಿಡುಗುಗಳನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರತ್ಯಕ್ಷ ನಿದರ್ಶನ ಎಂಬಂತೆ ತಮಿಳುನಾಡಿನ ಕೃಷ್ಣಗಿರಿಯಲ್ಲೊಂದು ಘಟನೆ ಭಾನುವಾರ ನಡೆದಿದೆ.
ದೆವ್ವ ಭೂತ ಎಂದು ಹೆದರಿ ಮನೆಬಿಟ್ಟು ಹೋಗುವ ಕುಟುಂಬಗಳನ್ನು ನಾವು ಕಾಣುತ್ತೇವೆ. ಅದು ಅವರವರ ಮಾನಸಿಕ ಶಕ್ತಿಗೆ ಸಂಬಂಧಿಸಿದ್ದು ಎಂದು ಹೇಳಿ ನಮ್ಮನ್ನು ನಾವು ಕೆಲವೊಮ್ಮೆ ಸುಮ್ಮನಾಗಿಸಿಕೊಳ್ಳುವುದೂ ಉಂಟು. ತಮಿಳುನಾಡಿನ ಅಮ್ಮನಗಿರಿ ಹಾಗೂ ಕೃಷ್ಣಗಿರಿಯಲ್ಲಿ ದೆವ್ವ, ಭೂತವೆಂಬ ಭಯದಲ್ಲಿ ಇಡೀ ಊರಿಗೆ ಊರಿನ ಜನತೆಯೇ ಖಾಲಿಯಾಗಿದೆ.
ಕೃಷ್ಣಗಿರಿಯಲ್ಲಿ ಒಂದೇ ತಿಂಗಳಿನಲ್ಲಿ ವಯಸ್ಸಿಗೆ ಬಂದ ಮೂವರು ಯುವಕರು ಸಾವನ್ನಪ್ಪಿದ್ದು, ಇವರು ದೆವ್ವಗಳಾಗಿ ಊರಿನ ಜನತೆಯನ್ನು ಕಾಡುತ್ತಿದ್ದಾರೆಂಬ ಭಯ ಇಡೀ ಊರಿನ ಜನತೆಯಲ್ಲಿ ಮೂಡಿದೆ. ಹೀಗಾಗಿ ತಮ್ಮ ಭಯಗಳನ್ನು ದೂರ ಮಾಡಿಕೊಳ್ಳುವ ಸಲುವಾಗಿ ಇಡೀ ಗ್ರಾಮದ ಜನತೆ ದೊಡ್ಡ ರೀತಿಯ ಪೂಜೆಯೊಂದನ್ನು ಆಯೋಜಿಸಿದೆ. ಈ ಪೂಜೆಯನ್ನು ಮಾಡಿದರೆ, ಆ ಊರಿನಲ್ಲಿರುವ ದೆವ್ವ, ಭೂತಗಳು ಊರಿನಿಂದ ಹೊರಗೆ ಹೋಗುತ್ತದೆ ಎಂಬುದು ಅಲ್ಲಿನ ಜನರ ನಂಬಿಕೆಯಾಗಿದೆ. ಪೂಜೆಯಲ್ಲಿ ಒಂದು ವಿಶೇಷ ನಿಯಮವಿದ್ದು, ಈ ಪೂಜೆ ಮಾಡಿದ ನಂತರ ಸಂಜೆಯವರೆಗೂ ಆ ಊರಿನಲ್ಲಿ ಯಾರೂ ಇರಬಾರದೆಂಬ ನಿಯಮವಿದೆ. ಹಾಗಾಗಿ ಪೂಜೆಯ ನಿಯಮದಂತೆ ನಿನ್ನೆ ಇಡೀ ಊರಿನ ಜನತೆ ತಮ್ಮ ತಮ್ಮ ಮನೆಗಳನ್ನು ತೊರೆದು ಬೇರೆಡೆ ಸಾಗಿದ್ದಾರೆ.
ಪೂಜೆಗೆ ಯಾವ ವಿಘ್ನಗಳು ಬರಬಾರದು ಎಂಬ ಉದ್ದೇಶದಿಂದ ಊರಿನ ಹಿರಿಯ ಮುಖಂಡರು ಊರಿನ ಒಳಗೆ ಯಾರೂ ಹೋಗಬಾರದೆಂದು 15 ಭದ್ರತಾ ಸಿಬ್ಬಂದಿಗಳನ್ನು ನೇಮಿಸಿದ್ದಾರೆ.
ಭದ್ರತಾ ಸಿಬ್ಬಂದಿಗಳು ಬೆಳಿಗ್ಗೆಯಿಂದಲೇ ಊರಿನ ಬಾಗಿಲಿನಲ್ಲಿ ಕಾವಲು ನಿಂತಿದ್ದು, ಊರಿನ ಒಳಗೆ ಯಾರೂ ಹೋಗಬಾರದೆಂದು ಸ್ಥಳಕ್ಕೆ ಬಂದವರೆಲ್ಲರಿಗೂ ಸೂಚನೆ ನೀಡಿದ್ದಾರೆ.
ಈ ಪೂಜೆಯನ್ನು 10 ವರ್ಷಕ್ಕೊಮ್ಮೆ ಮಾಡಲಾಗುತ್ತದೆ. ಇಂತಹ ಪೂಜೆಯನ್ನು ನಾನು ನಾಲ್ಕು ಬಾರಿ ನೋಡಿದ್ದೇನೆ. ಈ ಪೂಜೆ ಮಾಡುವುದರಿಂದ ಊರಿನಲ್ಲಿರುವ ದೆವ್ವ, ಭೂತಗಳ ಶಕ್ತಿ ದೂರಾಗುತ್ತದೆ ಎಂಬ ನಂಬಿಕೆಯಿದೆ. ಹಾಗಾಗಿ ಊರಿನ ಜನತೆ ಈ ರೀತಿಯ ಪೂಜೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ.
Advertisement