
ನವದೆಹಲಿ: ಹಲವು ವಿವಾದಗಳ ನಡುವೆಯೇ ನೂತನ ಕೇಂದ್ರೀಯ ವಿಚಕ್ಷಣಾ ಆಯುಕ್ತ (Central Vigilance Commissioner)ರಾಗಿ ಕೆ.ವಿ. ಚೌಧರಿ ಅವರನ್ನು ನೇಮಕ ಮಾಡಲಾಗಿದ್ದು, ವಿಜಯ್ ಶರ್ಮಾ ಅವರನ್ನು ಮಾಹಿತಿ ಹಕ್ಕು ಆಯೋಗ (Chief Information Commissioner)ದ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ಸಿವಿಸಿ (ಕೇಂದ್ರೀಯ ವಿಚಕ್ಷಣಾ ಆಯೋಗ), ಸಿಐಸಿ (ಮುಖ್ಯ ಮಾಹಿತಿ ಆಯೋಗ ಆಯುಕ್ತರು) ಮತ್ತು ಲೋಕಪಾಲ್ ಗೆ ಮುಖ್ಯಸ್ಥರನ್ನು ನೇಮಿಸುವಂತೆ ಕಾಂಗ್ರೆಸ್ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದರು. ಈ ವೇಳೆ ಮಾತನಾಡಿದ್ದ ಸೋನಿಯಾ ಗಾಂಧಿ ಅವರು ಕೇಂದ್ರದ ಎನ್ ಡಿಎ ಸರ್ಕಾರ ಎಲ್ಲಿ ತನ್ನ ಭ್ರಷ್ಟಾಚಾರ ಪ್ರಕರಣಗಳು ಬಯಲಾಗುತ್ತದೆಯೋ ಎಂದು ಹೆದರಿ ಪಾರದರ್ಶಕ ಆಡಳಿತ ನೀಡಲು ಹಿಂಜರಿಯುತ್ತಿವೆ. ಹೀಗಾಗಿಯೇ ಸಿವಿಸಿ, ಸಿಐಸಿ ಮತ್ತು ಲೋಕಪಾಲ ಆಯೋಗಗಳಿಗೆ ಮುಖ್ಯಸ್ಥರನ್ನು ನೇಮಕ ಮಾಡಲು ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿದ್ದರು.
ಇದಲ್ಲದೆ ಹಲವು ಆರ್ ಟಿಐ ಕಾರ್ಯಕರ್ತರು ಕೂಡ ಸಿವಿಸಿ, ಸಿಐಸಿ ಆಯುಕ್ತರನ್ನು ನೇಮಿಸುವಲ್ಲಿ ಕೇಂದ್ರ ಸರ್ಕಾರ ತೋರಿದ ವಿಳಂಬ ಧೋರಣೆಯನ್ನು ಕಟುವಾಗಿ ಟೀಕಿಸಿದ್ದರು. ಅಂತಿಮವಾಗಿ ಕೇಂದ್ರ ಸರ್ಕಾರ ಎರಡು ಪ್ರಮುಖ ಆಯೋಗಗಳಿಗೆ ಮುಖ್ಯಸ್ಥರನ್ನು ಇದೀಗ ನೇಮಕ ಮಾಡಿದೆ.
ವಿವಾದಕ್ಕೀಡಾದ ಕೇಂದ್ರದ ಆಯ್ಕೆ
ಇದೇ ವೇಳೆ ಸಿವಿಸಿ ಹುದ್ದೆಗೆ ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಮಾಜಿ ಮುಖ್ಯಸ್ಥ ಕೆ.ವಿ. ಚೌಧರಿ ಅವರ ನೇಮಕವನ್ನು ಪ್ರಶ್ನಿಸಿರುವ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು, ಸಿವಿಸಿಯಂತಹ ಪ್ರಮುಖ ಆಯೋಗಕ್ಕೆ ಪ್ರಶ್ನಾತೀತ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುವ ವ್ಯಕ್ತಿಯನ್ನು ಆರಿಸಬೇಕಿತ್ತು. ಆದರೆ ಕೇಂದ್ರ ಸರ್ಕಾರ ಚೌದರಿಯಂತಹ ವಿವಾದಾತ್ಮಕ ವ್ಯಕ್ತಿಯನ್ನು ನೇಮಕ ಮಾಡಿದೆ. ಹೀಗಾಗಿ ತಾವು ಕೇಂದ್ರ ಸರ್ಕಾರದ ನೇಮಕದ ವಿರುದ್ಧ ಅಗತ್ಯ ಬಿದ್ದಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೂ ಪತ್ರ ಬರೆಯುವುದಾಗಿ ರಾಮ್ ಜೇಠ್ಮಲಾನಿ ಹೇಳಿದ್ದಾರೆ.
ಕೇಂದ್ರೀಯ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ) ಮಾಜಿ ಮುಖ್ಯಸ್ಥರಾದ ಕೆವಿ ಚೌದರಿ ಅವರ ಹೆಸರು ಸಿವಿಸಿ ಹುದ್ದೆಗೆ ಕೇಳಿಬರುತ್ತಿದ್ದಾಗಲೇ ಈ ಬಗ್ಗೆ ಹಿರಿಯ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಪ್ರಶಾಂತ್ ಭೂಷಣ್ ಚಕಾರವೆತ್ತಿದ್ದರು. ಅಲ್ಲದೆ ಚೌದರಿ ನೇಮಕಕ್ಕೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. 2ಜಿ ಸ್ಪೆಕ್ಟ್ರಂ ಹಾಗೂ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ಗಣ್ಯರು ಹಾಗೂ ಅಧಿಕಾರಿಗಳು ಸಿಬಿಐನ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ಅವರ ನಿವಾಸಕ್ಕೆ ಭೇಟಿ ನೀಡಿದ್ದನ್ನು ಸ್ವತಃ ಭೂಷಣ್ ಅವರೇ ಬಹಿರಂಗಪಡಿಸಿದ್ದರು.
ಸಿನ್ಹಾ ಮನೆಗೆ ಭೇಟಿ ನೀಡಿದ್ದವರ ಪೈಕಿ ಕೆ.ವಿ. ಚೌಧರಿ ಅವರೂ ಸೇರಿದ್ದಾರೆ. ಆ ಪಟ್ಟಿಯಲ್ಲಿ ಚೌಧರಿ ಅವರ ಹೆಸರು 4 ಬಾರಿ ನಮೂದಾಗಿದೆ. ಇದರಿಂದಾಗಿ ಅವರ ಬಗ್ಗೆ ಸಹಜವಾಗಿಯೇ ಅನುಮಾನ ಮೂಡುತ್ತದೆ. ಹಾಗಾಗಿ ಚೌಧರಿ ಅವರನ್ನು ಸಿವಿಸಿಯನ್ನಾಗಿ ನೇಮಕ ಮಾಡಬಾರದು' ಎಂದು ಪ್ರಶಾಂತ್ ಭೂಷಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು ಎಂದು ಕೆಲ ಖಾಸಗಿ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದವು.
Advertisement