ಮ್ಯಾಗಿ ವಿವಾದ: ಶೇ.23ರಷ್ಟು ರಕ್ತದ ಮಾದರಿಗಳಲ್ಲಿ ವಿಷಕಾರಿ ಲೆಡ್ ಪತ್ತೆ

ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಗಳ ಪತ್ತೆಯಾದ ಹಿನ್ನಲೆಯಲ್ಲಿ ಇತರೆ ಫಾಸ್ಟ್ ಫುಡ್ ಗಳತ್ತಲೂ ಅನುಮಾನ ಮೂಡುತ್ತಿದ್ದಂತೆಯೇ ಮತ್ತೊಂದು ಆಘಾತಕಾರಿ ವರದಿ ಬೆಳಕಿಗೆ ಬಂದಿದೆ...
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮ್ಯಾಗಿ ನೂಡಲ್ಸ್
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಮ್ಯಾಗಿ ನೂಡಲ್ಸ್
Updated on

ನವದೆಹಲಿ: ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿ ವಿಷಕಾರಿ ಅಂಶಗಳ ಪತ್ತೆಯಾದ ಹಿನ್ನಲೆಯಲ್ಲಿ ಇತರೆ ಫಾಸ್ಟ್ ಫುಡ್ ಗಳತ್ತಲೂ ಅನುಮಾನ ಮೂಡುತ್ತಿದ್ದಂತೆಯೇ ಮತ್ತೊಂದು ಆಘಾತಕಾರಿ ವರದಿ ಬೆಳಕಿಗೆ ಬಂದಿದೆ.

ದೇಶಾದ್ಯಂತ ಸಂಗ್ರಹಿಸಲಾದ ವಿವಿಧ ರಕ್ತದ ಮಾದರಿಗಳ ಪೈಕಿ ಶೇ.23ರಷ್ಟು ರಕ್ತದ ಮಾದರಿಗಳಲ್ಲಿ ವಿಷಕಾರಿ ಲೆಡ್ ಅಂಶಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಮೂಲಗಳ ಪ್ರಕಾರ ವಿಷಕಾರಿ ಲೆಡ್ ಅಂಶದಿಂದಾಗಿ ವಿಶ್ವಾದ್ಯಂತ ವಾರ್ಷಿಕ ಸುಮಾರು 1ಲಕ್ಷದ 43 ಸಾವಿರ ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ಬಹುತೇಕ ಪ್ರಮಾಣದ ಸಾವು ಸಂಭವಿಸುತ್ತಿರುವುದು ಭಾರತದಂತಹ ಅಭಿವೃದ್ಧಿ ಶೀಲ ರಾಷ್ಟಗಳಲ್ಲಿಯೇ.

ಇತ್ತೀಚೆಗೆ ಭಾರತದಲ್ಲಿ ವೀಕ್ಷಣೆಗೊಳಪಟ್ಟಿರುವ ನೆಸ್ಲೆ ಸಂಸ್ಥೆಯ ಮ್ಯಾಗಿ ನೂಡಲ್ಸ್ ನಲ್ಲಿಯೂ ವಿಷಕಾರಿ ಮಾನೋಸೋಡಿಯಂ ಗ್ಲುಟಮೇಟ್ ಮತ್ತು ಲೆಡ್ ಅಂಶ ಪತ್ತೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ನೂತನ ವರದಿಗೆ ಪುಷ್ಠಿ ನೀಡುವಂತಿದೆ. ಮತ್ತೊಂದು ಪ್ಯಾನ್ ಇಂಡಿಯಾ ಸಂಶೋಧಕ ಸಂಸ್ಥೆ ಕಳೆದ ದೇಶಾದ್ಯಂತ ಸಂಗ್ರಹಿಸಿರುವ ಸುಮಾರು 733 ರಕ್ತದ ಮಾದರಿಗಳ ಪೈಕಿ ಶೇ.23.47ರಷ್ಟು ರಕ್ತದ ಮಾದರಿಗಳಲ್ಲಿ ವಿಷಕಾರಿ ಲೆಡ್ ಅಂಶ ಪತ್ತೆಯಾಗಿದೆ. ಅಂದರೆ ಸುಮಾರು 172 ರಕ್ತದ ಮಾದರಿಗಳಲ್ಲಿ ಲೆಡ್ ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಪ್ಯಾನ್ ಇಂಡಿಯಾದ ವೈದ್ಯ  ಡಾ.ಸಂದೀಪ್ ವಾರ್ಗಡೆ ತಿಳಿಸಿದ್ದಾರೆ. ಲೆಡ್ ಸಂಚಿತ ವಿಷಕಾರಿ ಅಂಶವಾಗಿದ್ದು, ಇದು ಬೆಳೆಯುತ್ತಿರುವ ಮಕ್ಕಳಿಗೆ ತೀವ್ರ ಹಾನಿಕಾರಿಯಾಗಬಲ್ಲದು ಮತ್ತು ಮಕ್ಕಳ ದೇಹದ ಬಹುತೇಕ ಭಾಗಗಳನ್ನು ನಿಷ್ಕ್ರಿಯ ಮಾಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ವಿಷಕಾರಿ ಲೆಡ್ ಪ್ರಮಾಣ ಮಾನವನ ದೇಹ ಸೇರುವುದರಿಂದ ಕ್ರಮೇಣ ಆತನ ದೇಹದ ಬಹುತೇಕ ಭಾಗಗಳು ನಿಷ್ಕ್ರಿಯಗೊಳ್ಳುತ್ತವೆ. ಪ್ರಮುಖವಾಗಿ ಬೆಳೆಯುವ ಮಕ್ಕಳಲ್ಲಿ ಮೆದುಳು ಸಂಬಂಧಿತ ಖಾಯಿಲೆಗಳು, ನೆನಪಿನಶಕ್ತಿ ಕುಂಠಿತಗೊಳ್ಳುವಿಕೆ, ಹೈಪರ್ ಆಕ್ಟಿವಿಟಿ, ಓದಿನಲ್ಲಿ ನಿರಾಸಕ್ತಿ, ಮರೆಗುಳಿತನ, ರಕ್ತಹೀನತೆಯಂತದ ಗಂಭೀರ ಪ್ರಮಾಣದ ನ್ಯೂನ್ಯತೆಗಳು ಕಂಡುಬರುತ್ತವೆ ಎಂದು ಡಾ.ಸಂದೀಪ್ ವಾರ್ಗಡೆ ತಿಳಿಸಿದ್ದಾರೆ.

ಮೆಟ್ರೋ ಪೊಲಿಸ್ ಹೆಲ್ತ್ ಕೇರ್ ಸಂಸ್ಥೆ ಮಾಡಿರುವ ಸಂಶೋಧನೆಯ ಪ್ರಕಾರ ವಿಷಕಾರಿ ಲೆಡ್ ಅನ್ನು ಅತ್ಯಾಧುನಿಕ ಐಸಿಪಿಎಂಎಸ್ (Inductively Coupled Plasma Mass Spectrometry) ಮತ್ತು ಗ್ರ್ಯಾಫೈಟ್ ಫರ್ನೇಸ್ ಅಟಾಮಿಕ್ ಅಬ್ಸಾರ್ ಪ್ಶನ್ ಸ್ಪೆಕ್ಟ್ರೋಮೆಟ್ರಿ ಮೂಲಕ ಪರೀಕ್ಷೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಮಾನವನ ದೇಹದಲ್ಲಿರುವ ಲೆಡ್ ಪ್ರಮಾಣವನ್ನು ಪರೀಕ್ಷಿಸಲು ರಕ್ತ, ಮೂತ್ರ, ರಕ್ತಸಾರವನ್ನು ಕೂಡ ಪರೀಕ್ಷೆಗೊಳಪಡಿಸಲಾಗುತ್ತದೆ.

ಇನ್ನು ಸಂಶೋಧಕರ ಪ್ರಕಾರ ಈ ವಿಷಕಾರಿ ಲೆಡ್ ಅಂಶ ಪ್ರಕತಿಯ ಬಹುತೇಕ ವಸ್ತುಗಳಲ್ಲಿ ಕರಗುವ ಸಾಮರ್ಥ್ಯವನ್ನು ಹೊಂದಿದೆ. ಪ್ರಮುಖವಾಗಿ ಮಣ್ಣು, ನೀರು, ಮನೆಯ ಧೂಳಿನಲ್ಲಿಯೂ ಇದು ಮಿಶ್ರಣವಾಗಬಲ್ಲದು. ಇನ್ನು ಲೆಡ್ ಅಂಶ ಹೆಚ್ಚಾಗಿ ಪೆಟ್ರೋಲಿಯಂ ಉತ್ಪನ್ನಗಳು, ಪುನರ್ಬಳಕೆ ಮಾಡುವ ಬ್ಯಾಟರಿಗಳು, ಬೆಳ್ಳಿ ಸಂಸ್ಕರಣೆ, ಪೇಯಿಂಟ್ಸ್ ಗಳು (ಪ್ರಮುಖವಾಗಿ ಹಳದಿ ಬಣ್ಣದ ಪೇಯಿಂಟ್ಸ್), ವರ್ಣದ್ರವ್ಯಗಳು (ಕಲರ್ಸ್ ಗಳು)ಗಳಲ್ಲಿ ಬಳಕೆ ಮಾಡುತ್ತಾರೆ. ಉಳಿದಂತೆ ಮುದ್ರಣಾಲಯ, ಪಿಂಗಾಣಿ ಪಾತ್ರೆ ಮತ್ತು ಗ್ಲಾಸ್ ವಸ್ತುಗಳ ತಯಾರಿಕೆಯಲ್ಲಿ, ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ, ಬಣ್ಣದ ಪೆನ್ಸಿಲ್ ಗಳ ತಯಾರಿಕೆಯಲ್ಲಿ ಬಳಸುತ್ತಾರೆ ಎಂದು ತಿಳಿದುಬಂದಿದೆ.

ಒಟ್ಟಾರೆ ಮ್ಯಾಗಿಯಲ್ಲಿ ವಿಷಕಾರಿ ಲೆಡ್ ಅಂಶ ಪತ್ತೆಯಾದ ಬೆನ್ನಲ್ಲೇ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ನೂತನ ವರದಿ ಮಾರುಕಟ್ಟೆಯಲ್ಲಿರುವ ಎಲ್ಲ ಫಾಸ್ಟ್ ಫುಡ್ ಗಳನ್ನು ಅನುಮಾನದಿಂದ ನೋಡುವಂತೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com