ಇಸ್ಲಾಮಾಬಾದ್: ಪಾಕಿಸ್ತಾನ ಸೇನಾ ಮುಖ್ಯಸ್ಥ ರಾಹೀಲ್ ಷರೀಫ್ ಭಾರತದ ವಿರುದ್ಧ ತಮ್ಮ ವಾಗ್ದಾಳಿ ಮುಂದುವರೆಸಿದ್ದು, ಕಾಶ್ಮೀರದಲ್ಲಿರುವ ಪ್ರಜೆಗಳ ರಕ್ಷಣೆಗೆ ಯಾವುದೇ ದರ ತೆರಲೂ ಕೂಡ ತಾವು ಸಿದ್ಧ ಎಂದು ಹೇಳಿದ್ದಾರೆ.
ಶನಿವಾರ ಇಸ್ಲಾಮಾಬಾದಿನಲ್ಲಿ ನಡೆದ ನೌಕಾಪಡೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಾಹೀಲ್ ಷರೀಫ್ ಅವರು ಭಾರತದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಭಾರತದ ಹೆಸರನ್ನು ಹೇಳದೆಯೇ "ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಯ ಮೂಲಕ ನೆರೆಯ ದೇಶದಿಂದ ಆಸ್ಥಿರತೆ ಸೃಷ್ಟಿಸುವ ಹುನ್ನಾರ ನಡೆದಿದೆ. ಅಲ್ಲದೆ ದೇಶದ ವಿವಿಧ ಪ್ರದೇಶಗಳಲ್ಲಿ ಉಗ್ರರ ಪೊಷಣೆ ಮಾಡಲಾಗುತ್ತಿದೆ ಎಂದು ಷರೀಫ್ ಆರೋಪಿಸಿದರು.
ಇಡೀ ವಿಶ್ವವೇ ನಮ್ಮ ಸುರಕ್ಷತೆಯ ಕುರಿತು ಕುತೂಹಲದಿಂದ ನೋಡುತ್ತಿದ್ದು, ಕದನ ವಿರಾಮ ಉಲ್ಲಂಘನೆ, ಬಲೂಚಿಸ್ತಾನದಲ್ಲಿ ರಕ್ತಪಾತ, ಉಗ್ರರನ್ನು ಎತ್ತಿಕಟ್ಟುವ ಮೂಲಕ ಬುಡಕಟ್ಟು ಪ್ರದೇಶಗಳಲ್ಲಿ ಅಶಾಂತಿ ಸೃಷ್ಟಿಸಲಾಗುತ್ತಿದೆ. ಪಾಕಿಸ್ತಾನ ಶಾಂತಿಗಾಗಿ ತನ್ನ ನೆರೆಯ ರಾಷ್ಟ್ರಗಳೊಂದಿಗೆ ಸಹಕರಿಸು ಇಚ್ಛೆ ಹೊಂದಿದೆಯಾದರೂ, ರಾಷ್ಟ್ರೀಯ ಹಿತಾಸಕ್ತಿಯನ್ನು, ತನ್ನ ಸಾರ್ವಭೌಮತ್ವದ ಹಕ್ಕು ಅಥವಾ ರಾಷ್ಟ್ರೀಯ ಗೌರವವನ್ನು ಬಲಿ ಕೊಡಲು ಸಿದ್ಧವಿಲ್ಲ ಎಂದು ರಾಹೀಲ್ ಷರೀಫ್ ಭಾರತದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇನ್ನು ಕಾಶ್ಮೀರ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕಾಶ್ಮೀರದ ಹಿತಕಾಯಲು, ನಮ್ಮ ರಾಷ್ಟ್ರತ್ವವನ್ನು ಮತ್ತು ನಮ್ಮ ಆಸಕ್ತಿಗಳನ್ನು ರಕ್ಷಿಸಲು ನಾವು ಯಾವುದೇ ರೀತಿಯ ಬೆಲೆ ತೆರಲು ಸಿದ್ಧ ಎಂದು ಹೇಳಿದರು.
Advertisement