
ನವದೆಹಲಿ: ಬಿಹಾರದಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲೇ ಬಿಜೆಪಿ ಎದುರಿಸಲಿದೆ. ಈಗಲೇ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ ಎಂದು ಪಕ್ಷದ ಚುನಾವಣಾ ಉಸ್ತುವಾರಿ, ರಸಗೊಬ್ಬರ ಸಚಿವ ಅನಂತ್‍ಕುಮಾರ್ ಹೇಳಿದ್ದಾರೆ.
ಬಿಹಾರ ರಾಜ್ಯ ರಾಜಕಾರಣದಲ್ಲಿ ಬಿಜೆಪಿಯ ಹಲವಾರು ನಾಯಕರು ಉನ್ನತ ಹುದ್ದೆಯಲ್ಲಿದ್ದು, ಎಲ್ಲರೂ ಸಮರ್ಥರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿಯೇ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನರೇಂದ್ರ ಮೋದಿ ಅವರು ಬಿಜೆಪಿಯ ಮುಖ. ಹೀಗಾಗಿ ಅವರ ನಾಯಕತ್ವದಲ್ಲಿಯೇ ಮುಂದಡಿ ಇಡುತ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ಜೆಡಿಯು, ಆರ್‍ಜೆಡಿ ಮತ್ತು ಕಾಂಗ್ರೆಸ್ ಮೈತ್ರಿಕೂಟದಿಂದ ಮಾಜಿ ಸಿಎಂ ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಷರೀಫ್ ಜತೆ ಮೋದಿ ಮಾತುಕತೆ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಗೆ ಕರೆ ಮಾಡಿ ರಂಜಾನ್ ಹಬ್ಬದ ಶುಭ ಕೋರಿದ್ದಾರೆ. ಈ ಮೂಲಕ ಕೆಲವು ದಿನಗಳಿಂದ ಎರಡೂ ದೇಶಗಳ ಮಧ್ಯೆ ನಡೆಯುತ್ತಿದ್ದ ಮಾತಿನ ಸಮರಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ. ಅಲ್ಲದೆ, ಎರಡೂ ದೇಶಗಳ ಮಧ್ಯೆ ಶಾಂತಿಯುತ ಮತ್ತು ಸ್ನೇಹ ಸಂಬಂಧ ಏರ್ಪಡಬೇಕೂ ಎಂದೂ ಹೇಳಿದ್ದಾರೆ. ಸುಮಾರು ಐದು ನಿಮಿಷ ಕಾಲ ಮಾತನಾಡಿರುವ ಮೋದಿ, ರಂಜಾನ್ ದಿನದಂದು ಭಾರತದ ಬಂಧನದಲ್ಲಿರುವ ಮೀನುಗಾರರ ಬಿಡುಗಡೆ ಮಾಡುವುದಾಗಿಯೂ ತಿಳಿಸಿದ್ದಾರೆ.
Advertisement