ನವದೆಹಲಿ: ಇತ್ತೀಚೆಗಷ್ಟೇ ತುರ್ತು ಪರಿಸ್ಥಿತಿ ಹೇರಿಕೆ ಕುರಿತು ಹೇಳಿಕೆ ನೀಡಿ ಬಿಜೆಪಿ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದ ಪಕ್ಷದ ಹಿರಿಯ ಮುಖಂಡ ಎಲ್ ಕೆ ಅಡ್ವಾಮಿ ಅವರು ಶನಿವಾರ ತಮ್ಮ ಹೇಳಿಕೆ ಕುರಿತಂತೆ ಸ್ಪಷ್ಟನೆ ನೀಡಿದ್ದು, ತಾವು ಹೇಳಿದ್ದು, ಕಾಂಗ್ರೆಸ್ ಪಕ್ಷವನ್ನುದ್ದೇಶಿಸಿ ಹೊರತು ಮೋದಿ ಸರ್ಕಾರವನ್ನಲ್ಲ ಎಂದು ಹೇಳಿದ್ದಾರೆ.
ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ ಮಾತನಾಡಿದ ಎಲ್ ಕೆ ಅಡ್ವಾಣಿ, ಅಧಿಕಾರದಲ್ಲಿರುವವರು ಗರ್ವ, ಅಹಂ ಗುಣಗಳನ್ನು ಮೈಗೂಡಿಸಿಕೊಳ್ಳಬಾರದು. ಇಂತಹವರನ್ನು ಕಂಡರೆ ನನಗಾಗದು. ರಾಜಕೀಯ ಮುಖಂಡರು ವಾಜಪೇಯಿ ಅವರಿಂದ ನಮ್ರತೆಯನ್ನು ಕಲಿತುಕೊಳ್ಳಬೇಕು. ಇಂದಿನ ರಾಜಕಾರಣಿಗಳಿಗೆ ಅವರ ನಡೆಗಳು ಸ್ಪೂರ್ತಿಯಾಗಬೇಕು ಎಂದು ಹೇಳಿದರು.
ಇದೇ ವೇಳೆ ತುರ್ತು ಪರಿಸ್ಥಿತಿ ಮಾದರಿ ವಾತಾವರಣ ಮತ್ತೆ ಮರುಕಳಿಸಬಹುದೆಂಬ ಹೇಳಿಕೆ ಮೋದಿ ಸರ್ಕಾರ ಕುರಿತ ಟೀಕೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ನಲವತ್ತು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಮನಸ್ಸಿನಲ್ಲಿರಿಸಿ ನಾನು ಆ ಹೇಳಿಕೆ ನೀಡಿದ್ದೆ. ತುರ್ತು ಪರಿಸ್ಥಿತಿ ಬಳಿಕ ಕಾಂಗ್ರೆಸ್ ಪಕ್ಷ ಮುಂದೆ ಇಂತಹ ಘಟನೆ ಮರುಕಳಿಸುವುದಿಲ್ಲ ಎಂದು ಹೇಳಿತ್ತು. ಆದರೆ ಅದಾದ ನಂತರವೂ ಕಾಂಗ್ರೆಸ್ ಧೋರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಪ್ರಜಾತಂತ್ರದ ವಿರುದ್ಧ ಅದೆಂಥ ಘೋರ ಅಪರಾಧ ಎಂಬ ಸಂಗತಿಯನ್ನು ಆ ಪಕ್ಷ ಇದುವರೆಗೆ ಮನಗಂಡಿಲ್ಲ ಎಂದು ಅಡ್ವಾಣಿ ಹೇಳಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಜಾರಿಗೊಳಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ತಾವು ಅಭಿಪ್ರಾಯ ವ್ಯಕ್ತಪಡಿಸಿದ್ದೇ ಹೊರತು ಮೊದಿ ಸರ್ಕಾರದ ವಿರುದ್ಧವಲ್ಲ ಎಂದೂ ಎಲ್ ಕೆ ಅಡ್ವಾಣಿ ಸ್ಪಷ್ಟಪಡಿಸಿದರು. ರಾಜಕಾರಣಿಗಳನ್ನು ಸೆರೆ ಹಿಡಿದು ನಡೆಸಿಕೊಂಡ ರೀತಿ ಘನಘೋರವಾದುದು. ತುರ್ತು ಪರಿಸ್ಥಿತಿಯ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಷಾ ಆಯೋಗದ ವರದಿ ಇಂದಿಗೂ ಕೂಡ ಲಭ್ಯವಿಲ್ಲ ಎಂದು ಅಡ್ವಾಣಿ ಇದೇ ವೇಳೆ ವಿಷಾದ ವ್ಯಕ್ತಪಡಿಸಿದರು.
Advertisement