ಆಂಧ್ರಪ್ರದೇಶದಲ್ಲಿ ಮೀನು ಮಳೆ..!

ಸಾಮಾನ್ಯವಾಗಿ ಮಳೆಯ ನೀರಿನ ಜೊತೆಗೆ ಆಲಿಕಲ್ಲು ಬೀಳುವುದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಆಂಧ್ರಪ್ರದೇಶದಲ್ಲಿ ಮೀನು ಮತ್ತು ಕಪ್ಪೆ ಮಳೆ ಸುರಿದಿದೆ.
ಮೀನು ಮಳೆ
ಮೀನು ಮಳೆ
Updated on

ವಿಜಯವಾಡ: ಸಾಮಾನ್ಯವಾಗಿ ಮಳೆಯ ನೀರಿನ ಜೊತೆಗೆ ಆಲಿಕಲ್ಲು ಬೀಳುವುದನ್ನು ನಾವು ಕೇಳಿದ್ದೇವೆ ಮತ್ತು ನೋಡಿದ್ದೇವೆ. ಆದರೆ ಆಂಧ್ರಪ್ರದೇಶದಲ್ಲಿ ಮೀನು ಮತ್ತು ಕಪ್ಪೆ  ಮಳೆ ಸುರಿದಿದೆ.

ಹೌದು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ನಂದಿಗಾಮ ಬಳಿಯ ಗೊಳ್ಳಮುಡಿ, ಪಲ್ಲಗಿರಿ ಗ್ರಾಮಗಳ ವ್ಯಾಪ್ತಿಯ ಪ್ರದೇಶಗಳಲ್ಲಿ ಇತ್ತೀಚೆಗೆ ಭಾರಿ ಮಳೆ ಸುರಿದಿದ್ದು, ಆ ಮಳೆಯಲ್ಲಿ  ಆಗಸದಿಂದ ಮಳೆ ಹನಿಯೊಂದಿಗೆ ರಾಶಿ ರಾಶಿ ಮೀನುಗಳು ಬಿದ್ದಿವೆ. ರಾತ್ರಿ ಇಡೀ ಭಾರೀ ಮಳೆ ಸುರಿದಿದ್ದು, ಬೆಳಗ್ಗೆ ಜಮೀನುಗಳಿಗೆ ಬಂದ ಜನರಿಗೆ ರಾಶಿ ರಾಶಿ ಮೀನು ಕಂಡು  ಬಂದಿವೆ. ಸುಮಾರು 50 ಎಕರೆಯಷ್ಟು ಭೂಮಿಯಲ್ಲಿ ಬಿದ್ದ ಸುಮಾರು 500 ಗ್ರಾಂ ಗಳಷ್ಟು  ತೂಕವಿದ್ದ ಮೀನುಗಳನ್ನು ಕಂಡ ಜನ ದಿಗ್ಭ್ರಾಂತರಾದರೂ ಬಳಿಕ ಅದೇ  ಮೀನುಗಳನ್ನು ಮನೆಗಳಿಗೆ ಕೊಂಡೊಯ್ದು ಆಹಾರವನ್ನಾಗಿಸಿಕೊಂಡಿದ್ದಾರೆ.

ಈ ಅಚ್ಚರಿಯನ್ನು ನೋಡಲು ಸುತ್ತಮುತ್ತಲ ಗ್ರಾಮಗಳ ಜನ ಕೂಡ ತಂಡೋಪತಂಡವಾಗಿ ಈ ಗ್ರಾಮಗಳತ್ತ ಬಂದು ಕುತೂಹಲದಿಂದ ನೋಡಿದರು. ಕೆಲವರು ಮೀನುಗಳನ್ನು  ಹುಡುಕು ಶೇಖರಿಸಿ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ದರು.

ಮೀನು ಮಳೆ ನಿಜನಾ?
ಆಲಿಕಲ್ಲು ಮಳೆಯಂತೆ ಮೀನು ಮಳೆ ಮತ್ತು ಕಪ್ಪೆ ಮಳೆ ಆಗುವುದು ನಿಜವೇ ಎಂಬ ಪ್ರಶ್ನೆ ಮೂಡಬಹುದು. ಇದಕ್ಕೆ ತಜ್ಞರಿಂದ ಬಂದ ಉತ್ತರ ಹೌದು. ಮೀನು ಮತ್ತು ಕಪ್ಪೆ ಮಳೆ  ಮಳೆ ಬೀಳುತ್ತದೆಯಂತೆ. ಅಲ್ಲದೆ ಮಳೆಯೊಂದಿಗೆ ಮೀನುಗಳು ಬಿದ್ದಿರುವುದು ಇದೇ ಮೊದಲಲ್ಲ. ಭಾರತದ ಹಲವು ಪ್ರದೇಶಗಳಲ್ಲಿ ಮೀನು ಮತ್ತು ಕಪ್ಪೆ ಮಳೆ ಸುರಿದಿದೆಯಂತೆ.  ಅಲ್ಲದೆ ನೇಪಾಳ, ಸಿಂಗಾಪುರ್, ಜಪಾನ್, ಶ್ರೀಲಂಕಾ, ಥೈಲ್ಯಾಂಡ್ ಸೇರಿದಂತೆ ವಿಶ್ವದಾ ನಾನಾ ಭಾಗಗಳಲ್ಲಿ ಈ ಹಿಂದೆ ಹಲವು ಬಾರಿ ಮೀನುಗಳ ಮಳೆಯಾಗಿದೆಯಂತೆ.

2008ರ ಫೆಬ್ರವರಿ 8ರಂದು ಕೇರಳದಲ್ಲಿ, 2009ರ ಅಕ್ಟೋಬರ್‌ 24ರಂದು ಗುಜರಾತ್‌ನ ಜಾಮ್‌ನಗರದಲ್ಲಿ, 2013 ಸೆಪ್ಟೆಂಬರ್‌ 12ರಂದು ಚೆನ್ನೈನಲ್ಲಿ  ಮಳೆಯೊಂದಿಗೆ ಮೀನುಗಳು ಬಿದ್ದಿದ್ದವು ಎಂದು ಮೂಲಗಳು ತಿಳಿಸಿವೆ. ಜಪಾನ್, ಹಂಗೇರಿ, ಇಂಗ್ಲೆಂಡ್‌ ದೇಶಗಳಲ್ಲಿ ಕಪ್ಪೆ ಮಳೆ ಬಿದ್ದಿದೆ. ಮಳೆಯೊಂದಿಗೆ ಕಪ್ಪೆಗಳು ಬಿದ್ದ  ನಿದರ್ಶನಗಳಿವೆ. ಮೀನು ಮಳೆ, ಕಪ್ಪೆ ಮಳೆಗೆ  ಕಾರಣಗಳನ್ನೂ ಹವಾಮಾನ ಇಲಾಖೆ ವಿವರಿಸಿದೆ.

ಮೀನುಮಳೆ ಏಕಿ ಮತ್ತು ಹೇಗೆ ಆಗುತ್ತದೆ..?
ತಜ್ಞರ ಪ್ರಕಾರ ಈ ಮೀನು ಮಳೆಗೆ ಸುಂಟರಗಾಳಿ ಮತ್ತು ಚಂಡಮಾರುತಗಳು ಕಾರಣವಂತೆ. ಸಮುದ್ರದಲ್ಲಿ ಭಾರಿ ವೇಗವಾಗಿ ಬೀಸುವ ಈ ಸುಂಟರಗಾಳಿ ಮತ್ತು  ಚಂಡಮಾರುತಗಳು ಸಮುದ್ರನೀರಿನಲ್ಲಿ ಈಜಾಡುತ್ತಿರುವ ಪ್ರಾಣಿಗಳನ್ನು ತನ್ನತ್ತ ಸೆಳೆದುಕೊಳ್ಳುತ್ತವಂತೆ. ಸಾಮಾನ್ಯವಾಗಿ ಮೀನುಗಳು ಮತ್ತು ಕಪ್ಪೆಗಳ ಮೈಬಾರ  ಹಗರುವಾಗಿರುವುದರಿಂದ ಇವುಗಳು ಸುಂಟರಗಾಳಿ ರಭಸಕ್ಕೆ ಸಿಲುಕುತ್ತವೆ. ಹೀಗೆ ಸುಂಟರಗಾಳಿ ಮುಖಾಂತರವಾಗಿ ಮೋಡ ಸೇರುವ ಮೀನುಗಳು ಮತ್ತು ಕಪ್ಪೆಗಳು ಕ್ರಮೇಣ  ಮೋಡ ಕರಗಿದಾಗ ಮಳೆ ಮುಖಾಂತರವಾಗಿ ಭೂಮಿ ಮೇಲೆ ಬೀಳುತ್ತವೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com