
ಪಾಟ್ನಾ: ಭಾರತೀಯ ತಂತ್ರಜ್ಞಾನ ಸಂಸ್ಥೆ ಜಂಟಿ ಪ್ರವೇಶ ಪರೀಕ್ಷೆ(ಐಐಟಿ-ಜೆಇಇ) ಫಲಿತಾಂಶ ಹೊರಬಿದ್ದಿದ್ದು, ಬಿಹಾರದ ಒಂದೇ ಹಳ್ಳಿಯ 12 ಬಡ ವಿದ್ಯಾರ್ಥಿಗಳು ರ್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.
ಈ ಹಿಂದಿನ ಅಂಕಿ ಅಂಶಗಳನ್ನು ಹೋಲಿಸಿಕೊಂಡರೆ ಇದೇನು ಉತ್ತಮ ಸಾಧನೆ ಎಂದು ಹೇಳಲಾಗದು ಆದರೆ, ಈ ಬಾರಿಯ ವಿಶೇಷವೆನೆಂದರೆ ಇದೇ ಹಳ್ಳಿಯ ಬಡ ಕೂಲಿ ಕಾರ್ಮಿಕನ ಮಗಳಾದ ದೀಪಾ ಕುಮಾರಿ ಎಂಬ ವಿದ್ಯಾರ್ಥಿನಿ ರ್ಯಾಂಕ್ ಪಡೆದಿರುವುದು.
ಬಿಹಾರದ ಗಯಾ ಜಿಲ್ಲೆಯ ಪತ್ವಾಟೋಲಿ ಹಳ್ಳಿಯಲ್ಲಿ ಬಡ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ್ದ ಕುಟುಂಬಗಳೇ ಹೆಚ್ಚಾಗಿದ್ದು, ಅವರೆಲ್ಲ ಅನಕ್ಷರಸ್ಥರು ಅಥವಾ ಅಲ್ಪಸ್ವಲ್ಪ ಓದಿಕೊಂಡಿರುವವರು. ಅವರಿಗೆ ಐಐಟಿ ಏನೆಂಬುದೇ ಗೊತ್ತಿಲ್ಲ. ಆದರೆ ತಮ್ಮ ಮಕ್ಕಳು ಮಹತ್ವದ ಸಾಧನೆ ಮಾಡುತ್ತಿದ್ದಾರೆಂಬ ಹೆಮ್ಮೆ ಹಳ್ಳಿಗರಲ್ಲಿದೆ.
ಐಐಟಿ ಪರೀಕ್ಷೆಗಳನ್ನು ಬರೆಯಬೇಕಾದರೆ ಅದಕ್ಕೆ ಹೆಚ್ಚಿನ ಪರಿಶ್ರಮ ಶ್ರದ್ಧೆ ಬೇಕು. ಅದರ ಜತೆಗೆ ಟ್ಯೂಷನ್ ಗಳಿಗೆ ಕಳಿಸಬೇಕು. ಮೊದಲೇ ಬಡತನದಲ್ಲಿರುವ ಕುಟುಂಬಗಳು ಸಾವಿರಾರು ರುಪಾಯಿ ವ್ಯಯಿಸುವ ಸಾಮಥ್ಯವಿಲ್ಲ. ಆದರೆ ನಮ್ಮ ಮಕ್ಕಳು ಗ್ರೂಪ್ ಸ್ಟಡೀಸ್ ಮಾಡುವ ಮೂಲಕ ಈ ಸಾಧನೆ ಮಾಡಿರುವುದು ಇದೇ ಹಳ್ಳಿಗನಾಗಿರುವ ನನಗೆ ಹೆಮ್ಮೆ ವಿಷಯ ಎಂದು ಸಿಯಾರಾಮ್ ಎಂಬುವರು ಹೇಳಿದ್ದಾರೆ.
ಬಿಹಾರದ ಸೂಪರ್ 30 ಸಂಸ್ಥೆಯಲ್ಲಿ ತರಬೇತಿ ಪಡೆದ 30 ಅಭ್ಯರ್ಥಿಗಳ ಪೈಕಿ 27 ಮಂದಿ ಪಾಸಾಗಿದ್ದಾರೆ. ಈ ಮೂಲಕ ಸಂಸ್ಥೆ ತನ್ನ ಹಳೆಯ ದಾಖಲೆಯನ್ನು ಕಾಯ್ದುಕೊಂಡಿದೆ.
ಕೂಲಿ ಕಾರ್ಮಿಕರೊಬ್ಬರ ಮಗ ಸುನೀಲ್ ಎಂಬುವರು ಐಐಟಿ ಪರೀಕ್ಷೆಯಲ್ಲಿ ಪಾಸಾದ ಖುಷಿಯೊಂದಿಗೆ ಆನಂದ ಬಾಷ್ಪ ಸುರಿಸಿದರು. ''ಗಣಿತಜ್ಞ ಆನಂದ್ ಅವರು ಮಾಡುತ್ತಿರುವ ಜನ ಹಿತ ಕೆಲಸದಿಂದ ನಮ್ಮಂಥವರು ಉದ್ಧಾರವಾಗಿದ್ದಾರೆ. ಅವರನ್ನು ಅನುಸರಿಸುವೆ,'' ಎಂದು ಸುನೀಲ್ ಹೇಳಿದ್ದಾರೆ.
Advertisement