
ನವದೆಹಲಿ: ಅಧಿಕಾರಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ವಾದ-ವಿವಾದಗಳನ್ನು ಹೆಗಲ ಮೇಲೆ ಹೊತ್ತು ಸಾಗುತ್ತಿರುವ ದೆಹಲಿಯ ಆಪ್ ಸರ್ಕಾರ ತನ್ನ ಚೊಚ್ಚಲ ಬಜೆಟ್ ಮಂಡಿಸಿದೆ.
ರಾಜಕೀಯ ಲೆಕ್ಕಾಚಾರ ಮತ್ತು ಸುಧಾರಣೆಗಳನ್ನು ಸಮಾನವಾಗಿ ತೆಗೆದುಕೊಂಡು ಹೋಗಲು ಆಪ್ ಸರ್ಕಾರ, ಸಾಮಾಜಿಕ ವಲಯಕ್ಕೆ ನ್ಯಾಯ ಒದಗಿಸಲು ಮತ್ತು ವ್ಯಾಪಾರ ಸಮುದಾಯವನ್ನು ಪ್ರೋತ್ಸಾಹಿಸಲು ಬಜೆಟ್ ನಲ್ಲಿ ಘೋಷಣೆ ಮಾಡಿದೆ.
41 ಸಾವಿರದ 129 ಕೋಟಿ ರೂಪಾಯಿ ಯೋಜನಾ ಗಾತ್ರದ ಬಜೆಟ್ ನ್ನು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಇಂದು ದೆಹಲಿ ವಿಧಾನಸಭೆಯಲ್ಲಿ ಮಂಡಿಸಿದರು. ತಮ್ಮ ಬಜೆಟ್ ನ್ನು ಸ್ವರಾಜ್ ಬಜೆಟ್ ಎಂದು ವ್ಯಾಖ್ಯಾನಿಸಿದ ಅವರು ಬಡ ಮತ್ತು ಮಧ್ಯಮ ವರ್ಗದವರನ್ನು ಗಮನದಲ್ಲಿಕೊಂಡು ಯೋಜನೆ ಘೋಷಿಸಲಾಗಿದೆ. ವ್ಯಾಟ್ ತೆರಿಗೆಯನ್ನು ಹೆಚ್ಚಿಸದೆ ಮನರಂಜನೆ ಮತ್ತು ಐಶಾರಾಮಿ ತೆರಿಗೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದರು.
ಪಾತ್ರೆಗಳು, ಪೀಠೋಪಕರಣ ಮತ್ತು ವ್ಯಾಕ್ಸ್ ಉತ್ಪನ್ನಗಳ ಬೆಲೆ ಅಗ್ಗವಾಗಲಿದ್ದು, ಜಿಮ್, ಕ್ಲಬ್, ಸ್ಪಾ ಮತ್ತು ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ವೀಕ್ಷಣೆ ಇನ್ನು ಮುಂದೆ ದೆಹಲಿಯಲ್ಲಿ ದುಬಾರಿಯಾಗಲಿದೆ.
ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳಂತೆ ಶಿಕ್ಷಣ, ಆರೋಗ್ಯ, ಸಾರಿಗೆ, ನೀರು, ವಿದ್ಯುತ್ ಗಳಿಗೆ ಸಿಂಹಪಾಲು ಅನುದಾನ ನೀಡಿದ್ದು, ಗ್ರಾಮಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ಉಚಿತ ವೈ ಫೈ ಸೇವೆ ಒದಗಿಸಲು 50 ಕೋಟಿ ರೂಪಾಯಿಗಳನ್ನು ಆಪ್ ಸರ್ಕಾರ ಮೀಸಲಿಟ್ಟಿದೆ.
ಎಲ್ಲಾ ಸರ್ಕಾರಿ ಶಾಲೆಗಳ ತರಗತಿಗಳಲ್ಲಿ ಮತ್ತು ದೆಹಲಿ ಸಾರಿಗೆ ಬಸ್ಸುಗಳಲ್ಲಿ ಸಿಸಿಟಿವಿ ಅಳವಡಿಕೆ, ಮಾಲಿನ್ಯವನ್ನು ತಡೆಗಟ್ಟಲು ದೆಹಲಿ ನಗರದೊಳಗೆ ಪ್ರವೇಶಿಸುವ ಭಾರೀ ವಾಹನಗಳಿಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ.
ಸ್ವರಾಜ್ ನಿಧಿಯನ್ನು ಘೋಷಿಸಿ ಅದಕ್ಕಾಗಿ 253 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಸ್ವರಾಜ್ ನಿಧಿ ನೂತನ ಪ್ರಯೋಗವಾಗಿದ್ದು, ಸಾರ್ವಜನಿಕರು ಇದರಡಿ ಎಷ್ಟು ಹಣವನ್ನು ಖರ್ಚು ಮಾಡಬೇಕೆಂದು, ಹೇಗೆ ಬಳಸಬೇಕೆಂದು ಜನರೇ ತೀರ್ಮಾನಿಸುತ್ತಾರೆ ಎಂದರು.
ಯೋಜನಾ ವೆಚ್ಚ 19 ಸಾವಿರ ಕೋಟಿ ರೂಪಾಯಿ ಮತ್ತು ಯೋಜನಾರಹಿತ 22 ಸಾವಿರದ 129 ಕೋಟಿ ರೂಪಾಯಿಗಳಾಗಿವೆ.
ದೆಹಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕಾಗಿ ನಾವು ಆಗ್ರಹಿಸುವುದಲ್ಲದೆ, ದೇಶದಲ್ಲಿಯೇ ಮೊದಲ ಭ್ರಷ್ಟಾಚಾರರಹಿತ ರಾಜ್ಯವನ್ನಾಗಿ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಸಿಸೋಡಿಯಾ ಹೇಳಿದರು.
Advertisement