
ನವದೆಹಲಿ: ಇಂಧನ ಮತ್ತು ಸಂಪನ್ಮೂಲ ಸಂಸ್ಥೆಯ(ಟಿಇಆರ್ ಐ) ಮಾಜಿ ಮುಖ್ಯಸ್ಥ ಆರ್. ಕೆ. ಪಚೌರಿ ಅವರಿಗೆ ಅಮೆರಿಕದಲ್ಲಿ ತಮ್ಮ ಭಾವನ ಅಂತಿಮ ವಿಧಿ ವಿಧಾನ ಕಾರ್ಯದಲ್ಲಿ ಪಾಲ್ಗೊಳ್ಳಲು ದೆಹಲಿ ನ್ಯಾಯಾಲಯ ಶನಿವಾರ ಅನುಮತಿ ನೀಡಿದೆ.
ಮಹಿಳಾ ಉದ್ಯೋಗಿಯೊಬ್ಬರಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ಆರ್.ಕೆ.ಪಚೌರಿ ಅವರಿಗೆ ಜೂನ್ 29ರಿಂದ ಜುಲೈ 9ರವರೆಗೆ ಅಮೆರಿಕದಲ್ಲಿ ಪ್ರಯಾಣಿಸಲು ಮೆಟ್ರೋಪೊಲಿಟನ್ ನ್ಯಾಯಾಧೀಶೆ ಶಿವಾನಿ ಚೌಹಾನ್ ಅನುಮತಿ ನೀಡಿದ್ದಾರೆ.
ಅಮೆರಿಕಕ್ಕೆ ತಲುಪಿದಾಗ ಅಲ್ಲಿನ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿ ತಮ್ಮ ಪ್ರಯಾಣದ ಸಂಪೂರ್ಣ ವಿವರಗಳನ್ನು, ಪ್ರಯಾಣದ ಟಿಕೆಟ್ ಪ್ರತಿಯನ್ನು ಮತ್ತು ಪಾಸ್ ಪೋರ್ಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಮತ್ತು ಜುಲೈ 9ಕ್ಕೆ ಭಾರತಕ್ಕೆ ಮರಳಿದಾಗ ಕೋರ್ಟ್ ಗೆ ಮತ್ತು ತನಿಖಾಧಿಕಾರಿಗಳಿಗೆ ತಿಳಿಸುವಂತೆ ನ್ಯಾಯಾಧೀಶರು ಸೂಚಿಸಿದ್ದಾರೆ. ಎರಡು ಲಕ್ಷ ರೂಪಾಯಿಗಳನ್ನು ಪಚೌರಿ ಅವರಿಂದ ಠೇವಣಿ ಇರಿಸಿಕೊಳ್ಳಲಾಗಿದೆ.
ಕಳೆದ ಮಾರ್ಚ್ 21ರಿಂದ ನಿರೀಕ್ಷಣಾ ಜಾಮೀನಿನಲ್ಲಿರುವ ಆರ್.ಕೆ.ಪಚೌರಿ, ಲೈಂಗಿಕ ಕಿರುಕುಳ ಕೇಸಿಗೆ ಸಂಬಂಧಪಟ್ಟಂತೆ ಈ ವಾರದಲ್ಲಿ ಪೊಲೀಸರಿಂದ ಎರಡು ಬಾರಿ ವಿಚಾರಣೆಗೆ ಒಳಗಾಗಿದ್ದರು.
Advertisement