
ಅಥೆನ್ಸ್: ಗ್ರೀಸ್ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು, ಸಾಲಗಾರರಿಂದ ತೆಗೆದುಕೊಂಡಿರುವ ಹಣವನ್ನು ಹಿಂತಿರುಗಿಸಲಾಗದೆ ಅಲ್ಲಿನ ಸರ್ಕಾರ ಇನ್ನು ಒಂದು ವಾರಗಳ ಕಾಲ ಬ್ಯಾಂಕುಗಳನ್ನು ಮುಚ್ಚುವುದಾಗಿ ಇಂದು ಬೆಳಗ್ಗೆ ಪ್ರಕಟಿಸಿತು. ಇದರಿಂದ ಜುಲೈ 6ರವರೆಗೆ ಬ್ಯಾಂಕು ವಹಿವಾಟು ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಇದರಿಂದ ನಾಗರಿಕರು ಹಣ ಹಿಂಪಡೆದುಕೊಳ್ಳಲು ಎಟಿಎಂ ಕೇಂದ್ರಗಳ ಮುಂದೆ ದೌಡಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಕೆಲವು ಎಟಿಎಂಗಳಲ್ಲಿ ಹಣ ಖಾಲಿಯಾಗಿದ್ದು, ಇನ್ನು ಕೆಲವು ಯಂತ್ರಗಳಲ್ಲಿ ಶೇಕಡಾ 40ರಷ್ಟು ಹಣ ಮಾತ್ರ ಇರುವುದು ಕಂಡುಬರುತ್ತಿತ್ತು.
ನಾಗರಿಕರು ಈ ದಿನಗಳಲ್ಲಿ ಪ್ರತಿದಿನ 60 ಯುರೋ ಅಂದರೆ 65 ಡಾಲರ್ ವರೆಗೆ ಮಾತ್ರ ಹಣವನ್ನು ಎಟಿಎಂಗಳಿಂದ ಹಿಂಪಡೆದುಕೊಳ್ಳುವಂತೆ ಸರ್ಕಾರ ನಿರ್ಬಂಧ ಹೇರಿದೆ.ವಿದೇಶಿ ಪ್ರವಾಸಿಗರಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಗ್ರೀಸ್ ನಲ್ಲಿ ಇಂದು ಬೆಳಗ್ಗೆ ಉಂಟಾದ ಬೆಳವಣಿಗೆಯಿಂದ ಬೆಳಗಿನ ವಹಿವಾಟು ಆರಂಭದಲ್ಲಿಯೇ ವಿಶ್ವಾದ್ಯಂತ ಷೇರು ಮಾರುಕಟ್ಟೆ ವಹಿವಾಟಿನ ಮೇಲೆ ಪರಿಣಾಮ ಬೀರಿತು.
ಗ್ರೀಕ್ ಪ್ರಧಾನ ಮಂತ್ರಿ ಅಲೆಕ್ಸಿಸ್ ಸಿಪ್ರಸ್, ಬ್ಯಾಂಕಿನಲ್ಲಿ ಹಣ ಇಟ್ಟವರು ಯಾವುದೇ ಆತಂಕಕ್ಕೀಡಾಗಬೇಕಿಲ್ಲ ಎಂದು ಜನತೆಗೆ ಅಭಯ ನೀಡಿದ್ದಾರೆ. ಈ ಪರಿಸ್ಥಿತಿಯನ್ನು ತಾಳ್ಮೆಯಿಂದ ಎದುರಿಸುವಂತೆ ದೇಶದ ಜನತೆಯನ್ನು ಅವರು ಕೋರಿದರು.
ಭಾರತದಲ್ಲಿ ಇಂದು ವಹಿವಾಟು ಆರಂಭದಲ್ಲಿ ಗ್ರೀಸ್ ನಲ್ಲಿನ ಹಣಕಾಸು ಬಿಕ್ಕಟ್ಟಿಗೆ ಹೆದರಿ ಜನರು ಷೇರುಗಳನ್ನು ಮಾರಾಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಂಬೈ ಷೇರು ಮಾರುಕಟ್ಟಿ ಇಂದು ಆರಂಭಿಕ ವಹಿವಾಟಿನಲ್ಲಿ 535 ಅಂಕ ಇಳಿಕೆ ಕಂಡು ನಂತರ ಕುಸಿಯಲಾರಂಭಿಸಿತು, ನಿಫ್ಟಿ 8 ಸಾವಿರದ 300ಕ್ಕೆ ಇಳಿಯಿತು.
ಜಾಗತಿಕ ಆರ್ಥಿಕತೆ 1930 ರಲ್ಲಿ ಎದುರಾಗಿದ್ದ ಗ್ರೇಟ್ ಡಿಪ್ರೆಷನ್(ಮಹಾ ಆರ್ಥಿಕ ಕುಸಿತ)ದ ಮಾದರಿಯ ಪರಿಸ್ಥಿತಿ ಅಂಚಿನಲ್ಲಿದೆ. ಇತ್ತೀಚೆಗೆ ಎದುರಾಗಿದ್ದ ಜಾಗತಿಕ ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿ ಪುನರಾವರ್ತನೆಯಾಗದಂತೆ ತಡೆಗಟ್ಟಲು ಹೊಸ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ರಘುರಾಮ್ ರಾಜನ್ ವಿಶ್ವದಾದ್ಯಂತ ಇರುವ ಕೇಂದ್ರೀಯ ಬ್ಯಾಂಕ್ ಗಳಿಗೆ ಇತ್ತೀಚೆಗೆ ಹೇಳಿದ್ದನ್ನುಇಲ್ಲಿ ಸ್ಮರಿಸಬಹುದು.
Advertisement